
ಮಂಡ್ಯ: ‘ಬೆಳೆಗೆ ಬೆಂಬಲ ಬೆಲೆ ನೀಡುವುದು, ರೈತರ ಆತ್ಮಹತ್ಯೆ ತಡೆಗಟ್ಟುವುದು, ಟನ್ ಕಬ್ಬಿಗೆ ಕನಿಷ್ಠ ₹3,500 ದರ ನಿಗದಿಪಡಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು ಸಮಸ್ಯೆ ಬಗೆಹರಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.
ಕೆ.ಆರ್. ಪೇಟೆ ತಾಲ್ಲೂಕಿನ ರೈತ ಎಂ.ಬಿ. ಮಂಜೇಗೌಡರ ಆತ್ಮಹತ್ಯೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಬೆಲೆ ನೀತಿ ಹಾಗೂ ಸಾಲದ ನೀತಿಗಳೇ ಕಾರಣವಾಗಿವೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಮೂಲಕ ಎಲ್ಲ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಕಾನೂನಿನ ರೀತಿ ಪರಿಹಾರದ ರೂಪದಲ್ಲಿ ಜಮೀನು ನೀಡಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆಯಂತೆ ಟನ್ ಕಬ್ಬಿಗೆ ಕನಿಷ್ಠ ₹3,500 ನಿಗದಿಪಡಿಸಬೇಕು. ಅದೇ ರೀತಿ ದಕ್ಷಿಣ ಕರ್ನಾಟಕ ಕಬ್ಬು ಬೆಳೆಗಾರರಿಗೆ ಟನ್ ಕಬ್ಬಿಗೆ ಕನಿಷ್ಠ ₹5 ಸಾವಿರ ನಿಗದಿ ಮಾಡಬೇಕು. ಕಾಯಂ ಆಗಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರಗಳನ್ನು ವರ್ಷ ಪೂರ್ತಿ ತೆರೆಯಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಗುರುಪ್ರಸಾದ್ ಕೆರಗೋಡು, ಸಿ.ಕುಮಾರಿ, ಸುನಿತಾ ಪುಟ್ಟಣ್ಣಯ್ಯ, ಲತಾ ಶಂಕರ್, ಲಿಂಗಪ್ಪಾಜಿ, ಎಂ.ಎಸ್.ವಿಜಯ್ ಕುಮಾರ್, ಜಿ.ಎ.ಶಂಕರ್, ಕೆ.ಟಿ.ಶಂಕರೇಗೌಡ, ಸುಜಾತಾ ಕೃಷ್ಣ, ವೇಣು ಡಿ.ಎಸ್,ಜಿ.ಜಿ ಹರೀಶ್ ಗೌಡ, ತೇಜ ಕುಮಾರ್, ರಾಮಚಂದ್ರೇಗೌಡ ಭಾಗವಹಿಸಿದ್ದರು.
‘ರಸಗೊಬ್ಬರ ಕಲಬೆರಕೆ: ಪರವಾನಗಿ ರದ್ದುಪಡಿಸಿ’
ಮದ್ದೂರು ಸೋಮೇಶ್ವರ ಟ್ರೇಡರ್ಸ್‌ನಲ್ಲಿ ರಸಗೊಬ್ಬರದ ಕಲಬೆರಕೆ ಅವ್ಯವಹಾರದ ಬಗ್ಗೆ ಪ್ರಾಮಾಣಿಕ ತನಿಖೆ ಮಾಡಿ ಸದರಿ ಟ್ರೇಡರ್ ಪರವಾನಗಿ ರದ್ದುಪಡಿಸಬೇಕು. ಜೊತೆಗೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ರೈತರ ಮೇಲಿರುವ ಎಲ್ಲ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ವಿವಿಧ ಯೋಜನೆಗಳ ಪಿಂಚಣಿ ಮತ್ತು ಹಣವನ್ನು ಸಾಲಗಳಿಗೆ ಹೊಂದಾಣಿಕೆ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.