ADVERTISEMENT

ಗಾಂಧಿ ಸರಳತೆ ಅನುಸರಣೆ ಸುಲಭವಲ್ಲ: ಡಾ.ಪ್ರೊ.ಜಯಪ್ರಕಾಶಗೌಡ

ಪ್ರೊ.ಎಂ.ಕರಿಮುದ್ದೀನ್‌ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 3:00 IST
Last Updated 6 ಜುಲೈ 2025, 3:00 IST
ಗಾಂಧಿವಾದಿ ಮತ್ತು ವಿಶ್ರಾಂತ ಅಧ್ಯಾಪಕ ಎಲ್‌.ನರಸಿಂಹಯ್ಯ ಅವರಿಗೆ ಪ್ರೊ.ಎಂ.ಕರಿಮುದ್ದೀನ್‌ ಹೆಸರಿನಲ್ಲಿ ಪ್ರಶಸ್ತಿ ನೀಡಲಾಯಿತು. ಡಾ.ಪ್ರೊ.ಜಯಪ್ರಕಾಶಗೌಡ, ಡಾ.ರಾಮಲಿಂಗಯ್ಯ, ಎಚ್‌.ಎಸ್‌.ಸುರೇಶ್‌ ಭಾಗವಹಿಸಿದ್ದರು
ಗಾಂಧಿವಾದಿ ಮತ್ತು ವಿಶ್ರಾಂತ ಅಧ್ಯಾಪಕ ಎಲ್‌.ನರಸಿಂಹಯ್ಯ ಅವರಿಗೆ ಪ್ರೊ.ಎಂ.ಕರಿಮುದ್ದೀನ್‌ ಹೆಸರಿನಲ್ಲಿ ಪ್ರಶಸ್ತಿ ನೀಡಲಾಯಿತು. ಡಾ.ಪ್ರೊ.ಜಯಪ್ರಕಾಶಗೌಡ, ಡಾ.ರಾಮಲಿಂಗಯ್ಯ, ಎಚ್‌.ಎಸ್‌.ಸುರೇಶ್‌ ಭಾಗವಹಿಸಿದ್ದರು   

ಮಂಡ್ಯ: ಮಹಾತ್ಮ ಗಾಂಧಿ ಅವರ ಸರಳತೆ ಅನುಸರಿಸುವುದು ಅಷ್ಟು ಸುಲಭದ ಮಾತಲ್ಲ. ಜೊತೆಗೆ ಅವರ ಅನುಕರಣೆಯು ಕ್ಲಿಷ್ಟಕರವೆಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಪ್ರೊ.ಜಯಪ್ರಕಾಶಗೌಡ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ಪ್ರೊ.ಎಂ.ಕರಿಮುದ್ದೀನ್‌ ಸ್ಮಾರಕ ಸಮಿತಿ ವತಿಯಿಂದ ಶನಿವಾರ ನಡೆದ ದ್ವಿತೀಯ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗಾಂಧಿಯವರ ಚಿಂತನೆಗಳನ್ನು ಅಪ್ಪಿಕೊಳ್ಳುವ ಮನಸುಗಳು ಸಮಾಜದಲ್ಲಿ ಬೇಕಿವೆ. ಗಾಂಧಿವಾದಿ ಎಲ್‌.ನರಸಿಂಹಯ್ಯ ಅವರನ್ನು ನೋಡಿದ ಹಾಗೆ ಅವರು ಗಾಂಧಿ ತತ್ವ ಪಾಲಿಸುತ್ತಿದ್ದಾರೆ. ಗಾಂಧಿ ವಿಚಾರವಾದಗಳು ಮತ್ತು ಅನುಷ್ಠಾನವನ್ನು ಮುನ್ನಲೆಗೆ ತರುವಂತಾಗಬೇಕು. ಪ್ರೊ.ಎಂ.ಕರಿಮುದ್ದೀನ್‌ ಅವರು ಯಾವ ವರ್ಗಕ್ಕೂ ಸೀಮಿತವಾಗದೇ ಎಲ್ಲರಿಗೂ ಬೇಕಿರುವ ಸರಳ ವ್ಯಕ್ತಿತ್ವದವರಾಗಿದ್ದರು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಿಇಟಿ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ರಾಮಲಿಂಗಯ್ಯ ಮಾತನಾಡಿ, ಗಾಂಧಿ ಅಂತಹ ಒಬ್ಬ ದೈತ್ಯ ವ್ಯಕ್ತಿ ಇದ್ದರು ಎಂಬುದನ್ನು ಮುಂದಿನ ಜನಾಂಗ ನೆನಪಿಸಿಕೊಂಡರೆ ಅವರು ಆಶ್ಚರ್ಯಪಡುತ್ತಾರೆ. ಅಂತಹ ಮಹಾನ್‌ ವ್ಯಕ್ತಿ ಗಾಂಧಿ ಆಗಿದ್ದಾರೆ. ಜಿಲ್ಲೆಗೆ ಕೀರ್ತಿ ತಂದ ಕೆ.ವಿ.ಶಂಕರಗೌಡ, ಜಿ.ಎಚ್‌.ಬೊಮ್ಮೇಗೌಡ, ಜಿ.ಮಾದೇಗೌಡ ಸೇರಿ ಹಲವು ಮಹನೀಯರನ್ನು ನೆನೆಯಬೇಕು. ಇವರೆಲ್ಲರೂ ಗಾಂಧಿ ಪ್ರಭಾವಕ್ಕೆ ಒಳಗಾಗಿದ್ದರು ಎಂದು ವಿವರಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕು ಘಟಕದ ಸರ್ವೋದಯ ಮಂಡಲದ ಡಾ.ಬಿ.ಸುಜಯ್‌ಕುಮಾರ್‌ ಉದ್ಘಾಟಿಸಿದರು. ಗಾಂಧಿವಾದಿ ಮತ್ತು ವಿಶ್ರಾಂತ ಅಧ್ಯಾಪಕ ಎಲ್‌.ನರಸಿಂಹಯ್ಯ ಅವರಿಗೆ ಪ್ರೊ.ಎಂ.ಕರಿಮುದ್ದೀನ್‌ ಹೆಸರಿನಲ್ಲಿ ₹10 ಸಾವಿರ ಮತ್ತು ಫಲಕದೊಂದಿಗೆ ಪ್ರಶಸ್ತಿ ನೀಡಲಾಯಿತು. ಆದರೆ, ಇವರು ₹10 ಸಾವಿರವನ್ನು ಮತ್ತೆ ವಾಪಸ್‌ ಸಮಿತಿಗೆ ಹಿಂತಿರುಗಿಸಿ ಪ್ರಬುದ್ಧತೆ ಮೆರೆದರು.

ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಎಚ್‌.ಎಸ್‌.ಸುರೇಶ್‌, ಸಾಹಿತಿ ಲಿಂಗಣ್ಣ ಬಂದೂಕರ್‌ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.