ADVERTISEMENT

ಮಂಡ್ಯ | ರಾಜ್ಯ ಸರ್ಕಾರದಿಂದ ‘ಗಬ್ಬರ್‌ಸಿಂಗ್‌ ಟ್ಯಾಕ್ಸ್‌’: ಆರ್‌.ಅಶೋಕ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 12:34 IST
Last Updated 22 ಸೆಪ್ಟೆಂಬರ್ 2025, 12:34 IST
   

ಮಂಡ್ಯ: ‘ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಇಳಿಕೆ ಮಾಡುವ ಮೂಲಕ ಬಡಜನರಿಗೆ ಸಿಹಿಸುದ್ದಿ ನೀಡಿದೆ. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕುಡಿಯುವ ನೀರು, ಹಾಲು, ಬಸ್‌ ಟಿಕೆಟ್‌ ಸೇರಿದಂತೆ ಒಟ್ಟು 25 ಸರಕುಗಳ ಮೇಲೆ ‘ಗಬ್ಬರ್‌ಸಿಂಗ್‌ ಟ್ಯಾಕ್ಸ್‌’ ಹಾಕಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಟೀಕಿಸಿದರು. 

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸುವ ಬದಲು ಕಾಂಗ್ರೆಸ್‌ ಸರ್ಕಾರ ಟೀಕಿಸುತ್ತಿದೆ. ಜಿಎಸ್‌ಟಿ ದರ ಇಳಿಕೆಯಿಂದ ನಮಗೆ ನಷ್ಟವಾಗುತ್ತದೆ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯದಲ್ಲೂ ಟ್ಯಾಕ್ಸ್ ಇಳಿಸಿ, ಕೇಂದ್ರಕ್ಕೆ ಸವಾಲು ಹಾಕಲಿ. ಆದರೆ, ಟ್ಯಾಕ್ಸ್‌ ಹಾಕುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು’ ಎಂದು ಆರೋಪಿಸಿದರು. 

‘ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ನಿಗಮ, ಮಂಡಳಿಗೆ ಶೇ 50ರಷ್ಟು ಅನುದಾನ ಕಡಿತವಾಗಿದೆ. ಇದರಿಂದ ಜನರಿಗೆ ಸಾಲ ಸೌಲಭ್ಯ ಸಿಗದೆ, ಮೈಕ್ರೋ ಫೈನಾನ್ಸ್‌ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದು ದೂರಿದರು. 

ADVERTISEMENT

ಸಿಎಂ ಕೃಪಾಪೋಷಿತ ನಾಟಕ ಮಂಡಳಿ

‘ಮೈಸೂರು, ಹಾಸನ, ಹುಬ್ಬಳ್ಳಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದ ಆರೋಪಿಗಳ ಮೇಲಿನ ಪ್ರಕರಣಗಳನ್ನು ಸರ್ಕಾರ ವಾಪಸ್‌ ತೆಗೆದುಕೊಂಡಿದೆ. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದರೆ, ಟಿಪ್ಪು ಜಯಂತಿ, ಹಿಂದೂಗಳ ಹತ್ಯೆ, ಲವ್‌ ಜಿಹಾದ್‌, ಗಲಭೆ ಪ್ರಕರಣಗಳು ಜಾಸ್ತಿಯಾಗುತ್ತವೆ. ವಿದೇಶದಿಂದ ಹಣ ಹರಿದು ಬರುತ್ತದೆ. ಅದನ್ನು ತಿಂದವರು ಋಣ ತೀರಿಸುತ್ತಾರೆ’ ಎಂದು ಆರೋಪಿಸಿದರು. 

ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಿ, ‘ಹಿಂದೂ ಅಂತ ಹೇಳಿದ್ದಕ್ಕೆ, ಯತ್ನಾಳ್‌ ಅವರನ್ನು ಬೆಂಬಲಿಸಿದ್ದಕ್ಕೆ ಸ್ವಾಮೀಜಿ ಅವರನ್ನು ಉಚ್ಚಾಟಿಸಿದ್ದಾರೆ. ಸ್ವಾಮೀಜಿ ಸಮರ್ಥರಿದ್ದು, ಇದೆಲ್ಲವನ್ನು ಎದುರಿಸುತ್ತಾರೆ’ ಎಂದರು. 

‘ರಾಜ್ಯ ಸರ್ಕಾರ ಕಾವೇರಿ ಆರತಿ ಮಾಡುವ ಮುನ್ನ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಲಿ. ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಕೊಡಿಸಲಿ. ಆರತಿ ಮಾಡುವುದಾದರೆ ಕಾವೇರಿ ನದಿ ಹರಿಯುವ ಕಡೆ ಮಾಡಲಿ. ಕದ್ದು ಮುಚ್ಚಿ ಆರತಿ ಮಾಡುವ ಅವಶ್ಯವೇನಿದೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.