ADVERTISEMENT

ಮಂಡ್ಯ: ಕುಸಿದು ಬಿದ್ದ ಗ್ಯಾಲರಿ; ವ್ಯಕ್ತಿ ಸಾವು- ಕಬಡ್ಡಿ ಪಂದ್ಯಾವಳಿ ವೇಳೆ ಅವಘಡ

ಹತ್ತು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:58 IST
Last Updated 27 ಏಪ್ರಿಲ್ 2025, 15:58 IST
ಮಂಡ್ಯ ತಾಲ್ಲೂಕಿನ ಮಲ್ಲನಾಯಕನಕಟ್ಟೆ ಕಬಡ್ಡಿ ಟೂರ್ನಿ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳ ಆರೋಗ್ಯವನ್ನು ಸಚಿವ ಎನ್‌.ಚಲುವರಾಯಸ್ವಾಮಿ ವಿಚಾರಿಸಿದರು
ಮಂಡ್ಯ ತಾಲ್ಲೂಕಿನ ಮಲ್ಲನಾಯಕನಕಟ್ಟೆ ಕಬಡ್ಡಿ ಟೂರ್ನಿ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳ ಆರೋಗ್ಯವನ್ನು ಸಚಿವ ಎನ್‌.ಚಲುವರಾಯಸ್ವಾಮಿ ವಿಚಾರಿಸಿದರು   

ಮಂಡ್ಯ: ತಾಲ್ಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಶನಿವಾರ ರಾತ್ರಿ ಕಬಡ್ಡಿ ಟೂರ್ನಿ ನಡೆಯುವ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಹತ್ತು ಜನ ಗಾಯಗೊಂಡಿದ್ದಾರೆ.

‘ಭೈರವ ಕಪ್‌’ ಹೆಸರಿನಲ್ಲಿ ಮೈಸೂರು ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಶನಿವಾರ ಮತ್ತು ಭಾನುವಾರ ಪಂದ್ಯಗಳು ನಡೆಯಬೇಕಿತ್ತು. ಶನಿವಾರ ರಾತ್ರಿ ಪಂದ್ಯ ನಡೆಯುವಾಗ ವೀಕ್ಷಕರ ಗ್ಯಾಲರಿ ಕುಸಿದ ರಭಸಕ್ಕೆ ಮಕ್ಕಳು ಸೇರಿದಂತೆ ಹಲವರಿಗೆ ಗಾಯಗಳಾದರೆ ಗ್ರಾಮದ ಪಾಪಣ್ಣಾಚಾರಿ (55) ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳುಗಳು ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿವ ಭೇಟಿ: ಘಟನೆ ತಿಳಿದು ನಗರದ ಮಿಮ್ಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗಳ ಆರೋಗ್ಯ ವಿಚಾರಿಸಿದರು. ಸರ್ಕಾರದಿಂದ ಪರಿಹಾರ ನೀಡುವ ಭರವಸೆ ನೀಡಿದರು.

ADVERTISEMENT

‘ಕಬಡ್ಡಿ ಟೂರ್ನಿ ಆಯೋಜಕರು ಪೊಲೀಸರಿಂದ ಅನುಮತಿ ಪಡೆದಿದ್ದರು. ಗ್ಯಾಲರಿಯನ್ನು ಭದ್ರವಾಗಿ ಹಾಕಿರದ ಕಾರಣ ಈ ಅವಘಡ ನಡೆದಿದೆ. ಜಿಲ್ಲಾಡಳಿತ ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತದೆ. ಮೃತನ ಕುಟುಂಬಕ್ಕೆ ವೈಯಕ್ತಿಕ ಸಹಾಯ ಮಾಡಿದ್ದೇನೆ. ಸರ್ಕಾರದಿಂದ ಪರಿಹಾರ ಕೊಡಿಸಲು ಮುಖ್ಯಮಂತ್ರಿ ಜೊತೆ ಮಾತನಾಡುವೆ’ ಎಂದರು.

ಮಾಜಿ ಸಚಿವ ಮನವಿ: ವೀಕ್ಷಕರ ಗ್ಯಾಲರಿ ಕುಸಿದು ಮೃತಪಟ್ಟ ಪಾಪಣ್ಣಾಚಾರಿ ಶವವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಕೃಷಿ ಸಚಿವ ಚಲುವರಾಯಸ್ವಾಮಿ, ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮೃತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಮಾಜಿ ಸಚಿವ ಪುಟ್ಟರಾಜು ಅವರು ಖುದ್ದು ಸಚಿವ ಚಲುವರಾಯಸ್ವಾಮಿಗೆ ಮನವಿ ಮಾಡಿದರು. ಪುಟ್ಟರಾಜು ಮನವಿಗೆ ಸ್ಪಂದಿಸಿದ ಚಲುವರಾಯಸ್ವಾಮಿ ಅವರು ಪರಿಹಾರ ಕೊಡಿಸುವ ಭರವಸೆ ನೀಡಿದರು.

ಶಾಸಕರಾದ ‍ಪಿ.ರವಿಕುಮಾರ್‌, ದರ್ಶನ್‌ ಪುಟ್ಟಣ್ಣಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ.ಸಿಇಒ ಕೆ.ಆರ್‌.ನಂದಿನಿ ಮುಖಂಡ ರುದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.