ADVERTISEMENT

ಮಂಡ್ಯ: ‘ಬೆಲ್ಲ’ದಲ್ಲಿ ಜೀವ ತಳೆದ ಗೌರಿ–ಗಣೇಶ!

ರಾಸಾಯನಿಕ ಮುಕ್ತ ಬೆಲ್ಲ ತಯಾರಿಸುವ ರೈತ ಉತ್ಪಾದಕರಿಂದ ವಿಶೇಷ ಪ್ರಯತ್ನ

ಎಂ.ಎನ್.ಯೋಗೇಶ್‌
Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
<div class="paragraphs"><p>ಬೆಲ್ಲದ ಮೂರ್ತಿಗಳು</p></div>

ಬೆಲ್ಲದ ಮೂರ್ತಿಗಳು

   

ಮಂಡ್ಯ: ರಾಸಾಯನಿಕ ಮುಕ್ತ ‘ಮಂಡ್ಯ ಬೆಲ್ಲ’ದಲ್ಲಿ ಜೀವ ತಳೆದ ಗೌರಿ– ಗಣೇಶ ಮೂರ್ತಿಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ.

ಮಂಡ್ಯ ಅಲ್ಲದೆ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯಿಂದಲೂ ಬೇಡಿಕೆ ಬರುತ್ತಿದೆ. ಅರ್ಧ ಅಡಿಯಿಂದ 2 ಅಡಿವರೆಗಿನ ಗಣೇಶ ಮೂರ್ತಿಗಳು, 5 ಇಂಚಿನಿಂದ ಅರ್ಧ ಅಡಿವರೆಗಿನ ಗೌರಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ADVERTISEMENT

ತಾಲ್ಲೂಕಿನ ಹಳುವಾಡಿಯ ಆಲೆಮನೆಯಲ್ಲಿ ಮೂರ್ತಿಗಳು ರೂಪ ಪಡೆಯುತ್ತಿವೆ. ಪ್ರತಿ ಬಾರಿ ಅಡುಗೆ (ಬೆಲ್ಲದ ಪಾಕ) ಬಂದಾಗ ಒಂದಷ್ಟು ಪಾಕವನ್ನು ಮೂರ್ತಿ ತಯಾರಿಕೆಗಾಗಿಯೇ ಬಳಸಲಾಗುತ್ತಿದೆ. ಅಚ್ಚು (ಮೌಲ್ಡ್‌) ಬಳಸುವ ಮೂಲಕ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಅರ್ಧ ಅಡಿ ಮೂರ್ತಿಗೆ ಒಂದೂವರೆ ಕೆ.ಜಿ ಬೆಲ್ಲ, 2 ಅಡಿ ಮೂರ್ತಿಗೆ 8–9 ಕೆ.ಜಿ ಬೆಲ್ಲ ಬಳಕೆಯಾಗುತ್ತಿದೆ. ಮೂರ್ತಿಗಳಿಗೆ ₹500– ₹2,000 ವರೆಗೆ ಬೆಲೆ ನಿಗದಿ ಮಾಡಲಾಗಿದೆ.

ರೈತ ಉತ್ಪಾದಕರ ಯತ್ನ: ರಾಸಾಯನಿಕ ಮುಕ್ತ ಬೆಲ್ಲ ತಯಾರಿಸುವ ಆಲೆಮನೆ ಮಾಲೀಕರು ಒಂದಾಗಿ ‘ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ’ ಕಟ್ಟಿಕೊಂಡಿದ್ದು, ತಾವು ತಯಾರಿಸಿದ ಬೆಲ್ಲಕ್ಕೆ ‘ಮಂಡ್ಯ ಬೆಲ್ಲ’ ಬ್ರ್ಯಾಂಡ್‌ ರೂಪ ಕೊಟ್ಟಿದ್ದಾರೆ. ಬೆಲ್ಲ ತಯಾರಿಕೆ ಮತ್ತು ಮಾರುಕಟ್ಟೆ ರೂಪಿಸಲು ಕೇಂದ್ರ ಸರ್ಕಾರದ ‘ರೈತ ಉತ್ಪಾದಕರ ಸಂಘ (ಎಫ್‌ಪಿಒ)– ಉತ್ತೇಜನ ಮತ್ತು ಬಲವರ್ಧನೆ’ ಕಾರ್ಯಕ್ರಮದಡಿ ಸಹಾಯವೂ ದೊರೆಯುತ್ತಿದೆ.

ಈ ಉತ್ಪಾದಕರಿಗೆ ‘ವಿಕನಸ ಗ್ರಾಮೀಣಾಭಿವೃದ್ಧಿ ಸಂಸ್ಥೆ’ಯೂ ಕೈಜೋಡಿಸಿದ್ದು, ಬೆಲ್ಲದಿಂದ ಗಣೇಶ ಮೂರ್ತಿ ತಯಾರಿಸಲು ಪ್ರೇರಣೆಯಾಗಿದೆ. ಸಂಸ್ಥೆಯವರು ಮಹಾರಾಷ್ಟ್ರದಿಂದ ಅಚ್ಚು ತರಿಸಿಕೊಟ್ಟಿದ್ದು ಮೂರ್ತಿಗಳ ಮಾರಾಟಕ್ಕೂ ಕೈ ಜೋಡಿಸಿದ್ದಾರೆ.

‘ರಾಜ್ಯದಾದ್ಯಂತ ಮೂರ್ತಿಗೆ ಬೇಡಿಕೆ ಇದೆ. ಅಚ್ಚುಗಳ ಕೊರತೆ ಕಾಡುತ್ತಿದ್ದು ಸಾಧ್ಯವಾದಷ್ಟು ತಯಾರಿಸುತ್ತಿದ್ದೇವೆ. ಕಳೆದ ವರ್ಷ 500 ಮೂರ್ತಿಗಳನ್ನಷ್ಟೇ ತಯಾರಿಸಿದ್ದೆವು, ಈ ಬಾರಿ 1,500 ಮೂರ್ತಿ ತಯಾರಿಸುವ ಗುರಿ ಇದೆ. ಮುಂದೆ ನಾವೇ ಅಚ್ಚು ರೂಪಿಸುವ ಚಿಂತನೆ ಇದ್ದು, ಹಬ್ಬಕ್ಕೆ 6 ತಿಂಗಳು ಮುಂಚೆಯೇ ಮೂರ್ತಿ ತಯಾರಿಕೆ ಆರಂಭಿಸುತ್ತೇವೆ’ ಎಂದು ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಕಾರಸವಾಡಿ ಮಹಾದೇವ ಹೇಳಿದರು.

ವಿಸರ್ಜನೆ ಬೇಡ, ಪ್ರಸಾದ ಸೇವಿಸಿ! ಬೆಲ್ಲದ ಗಣೇಶ ಮೂರ್ತಿಯನ್ನು ಭಕ್ತರು ನೀರಿನಲ್ಲಿ ವಿಸರ್ಜನೆ ಮಾಡುವುದಿಲ್ಲ. ಬದಲಾಗಿ ನೀರಿನಲ್ಲಿ ಮೂರ್ತಿಯನ್ನು ಕರಗಿಸಿ ಪ್ರಸಾದ ತಯಾರಿಸುತ್ತಾರೆ. ಬೆಲ್ಲದ ಅನ್ನ, ಪಾಯಸ ತಯಾರಿಸಬಹುದು. ಕಳೆದ ವರ್ಷ ಹಲವೆಡೆ ಇದೇ ರೀತಿ ಮಾಡಿದ್ದರು. ‘ಬೆಲ್ಲ ಎಂದೊಡನೆ ಇರುವೆಗಳು ಸಾಮಾನ್ಯ. ಆದರೆ ಇರುವೆಗಳು ಮೂರ್ತಿಯ ಹತ್ತಿರ ಸುಳಿಯದಂತೆ ಬೆಲ್ಲದ ಪಾಕಕ್ಕೆ ಅರಿಸಿನ ಪುಡಿ ಬೆರೆಸಿ ಮೂರ್ತಿ ತಯಾರಿಸಲಾಗುತ್ತದೆ’ ಎಂದು ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹೇಶ್‌ಚಂದ್ರ ಗುರು ತಿಳಿಸಿದರು.

ದಾವಣಗೆರೆಯಲ್ಲೂ ಬೆಲ್ಲದ ಗಣ‍ಪ

ದಾವಣಗೆರೆ: ‘ಮಂಡ್ಯದಲ್ಲಿ ಸಾವಯವ ಬೆಲ್ಲದಿಂದ ಗೌರಿ–ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಈ ಬಗೆಯ ಬೆಲ್ಲದ ಗಣಪತಿಗಳನ್ನು ಜಿಲ್ಲೆಯಲ್ಲೂ ಪರಿಚಯಿಸಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

‘ಈ ಹಿಂದೆ ಮಂಡ್ಯದ ಜಿಲ್ಲಾಧಿಕಾರಿಯಾಗಿದ್ದೆ. ಆಗ ಅಲ್ಲಿನ ರೈತ ಉತ್ಪಾದಕ ಸಂಸ್ಥೆಯ ಮೂಲಕ ಬೆಲ್ಲದ ಗಣಪತಿ ತಯಾರಿಸುವುದಕ್ಕೆ ಉತ್ತೇಜನ ನೀಡಲಾಗಿತ್ತು. ಈಗ ಆ ಸಂಸ್ಥೆಗೆ ಸಾಕಷ್ಟು ಬೇಡಿಕೆ ಬಂದಿದೆ. ದಾವಣಗೆರೆ ಜಿಲ್ಲೆಯಲ್ಲೂ ಮಾದರಿ ಗಣೇಶೋತ್ಸವ ಆಚರಿಸಬೇಕು. ಹೀಗಾಗಿಯೇ ಬೆಲ್ಲದ ಗಣೇಶ ಮೂರ್ತಿಗಳನ್ನು ಪರಿಚಯಿಸುತ್ತಿದ್ದೇವೆ. ಇದಕ್ಕಾಗಿ ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಸ್ವ–ಸಹಾಯ ಸಂಘಗಳಿಗೆ ತಾಂತ್ರಿಕ ನೆರವು ನೀಡಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ಮುಂಬರುವ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವವರು ವಧು–ವರರಿಗೆ ಬೆಲ್ಲದ ಮೂರ್ತಿಗಳನ್ನು ಉಡುಗೊರೆಯಾಗಿ ನೀಡಬಹುದು. ಹಬ್ಬಗಳಲ್ಲಿ ಬೆಲ್ಲದಿಂದ ಮಾಡಿದ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಬಹುದು. ರೈತ ಉತ್ಪಾದಕ ಸಂಘಗಳಿಗೆ ಜಿಲ್ಲೆಯಲ್ಲೇ ಮಾರುಕಟ್ಟೆ ಒದಗಿಸಲಾಗುತ್ತದೆ. ಇದರಿಂದ ರೈತರ ಆದಾಯ ವೃದ್ಧಿಯಾಗಲಿದ್ದು, ಪರಿಸರ ಮಾಲಿನ್ಯವನ್ನೂ ತಕ್ಕ ಮಟ್ಟಿಗೆ ತಡೆಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.