ನಾಗಮಂಗಲ ಪೊಲೀಸರಿಂದ ಅಂತರ ಜಿಲ್ಲಾ ಸರಗಳ್ಳನ ಬಂಧನ
ನಾಗಮಂಗಲ: ತಾಲ್ಲೂಕು ಸೇರಿದಂತೆ ಅಂತರ ಜಿಲ್ಲಾ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೆಳ್ಳೂರು ಠಾಣೆಯ ಪೊಲೀಸರು ಬಂಧಿಸಿ ಆರೋಪಿಯಿಂದ ₹7 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಭೂವನಹಳ್ಳಿ ಹೋಬಳಿಯ ಭೂತೇಶ್ವರನಗರದ( ಭೂರಪ್ಪನಗುಡಿ) ತಿಪ್ಪೇಶ್( ಭರತ್) ವಿವಿಧ ಸರಗಳ್ಳತನದಲ್ಲಿ ಭಾಗಿಯಾಗಿರುವ ಬಂಧಿತ ಆರೋಪಿ. ಆ.28 ಆಂಧ್ರಪ್ರದೇಶದ ಹಿಂದೂಪುರದಲ್ಲಿ ಆರೋಪಿಯನ್ನು ಬಂಧಿಸಿದ ಬೆಳ್ಳೂರು ಪೊಲೀಸರು ನಂತರ ವಿಚಾರಣೆ ನಡೆಸಿದಾಗ ಬೆಳ್ಳೂರು ಠಾಣೆಯ ಒಂದು ಪ್ರಕರಣ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಠಾಣೆಯ ವ್ಯಾಪ್ತಿಯ ಎರಡು ಸರಗಳ್ಳತನ ಪ್ರಕರಣಗಳನ್ನು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಯಿಂದ ಒಟ್ಟು 69 ಗ್ರಾಂ ತೂಕದ ಮೂರು ಚಿನ್ನದ ಸರಗಳು, ಒಂದು ಹೋಂಡಾ ಯೂನಿಕಾನ್ ಬೈಕ್ ₹ 7 ಲಕ್ಷದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಬೆಳ್ಳೂರು ಹೋಬಳಿಯ ವಡ್ಡರಹಳ್ಳಿ ಗ್ರಾಮದ ಕಿರಣ್ ಕುಮಾರ್ ಎಂಬುವರ ಪತ್ನಿ ಆ.15ರಂದು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಸ್ಕೂಟರ್ ನಲ್ಲಿ ಬೆಳ್ಳೂರು ಕ್ರಾಸ್ ಕಡೆಗೆ ಬರುತ್ತಿದ್ದಾಗ ಸಮೃದ್ಧಿ ಹೋಟೆಲ್ ಎದುರು ಹಿಂಬದಿಯಿಂದ ಬೈಕ್ ಸವಾರ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಬೆಳ್ಳೂರು ಠಾಣೆಗೆ ದೂರು ನೀಡಿದ್ದರು.
ಆರೋಪಿಗಳ ಪತ್ತೆಗೆ ಎಸ್ಪಿ ಮಲ್ಲಿಕಾರ್ಜುನ.ಎಸ್.ಬಾಲದಂಡಿ ವಿಶೇಷ ತಂಡ ರಚಿಸಿದ್ದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರ ಮಾರ್ಗದರ್ಶನ ದಲ್ಲಿ ಡಿವೈಎಸ್ಪಿ ಬಿ.ಚಲುವರಾಜು, ಸಿಪಿಐ ನಿರಂಜನ್ ಅವರ ನೇತೃತ್ವದಲ್ಲಿ ಬೆಳ್ಳೂರು ಪಿ.ಎಸ್.ಐ ವೈ.ಎನ್.ರವಿಕುಮಾರ್ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ನಾಗಮಂಗಲ ಬೆಳ್ಳೂರು ಠಾಣೆಯ ಪೊಲೀಸರು ಸರಗಳ್ಳತನ ಪ್ರಕರಣದ ಆರೋಪಿಯಿಂದ ವಶಪಡಿಸಿಕೊಂಡಿರುವ ಚಿನ್ನಾಭರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.