
ಹಲಗೂರು: ಕಸಬಾ ಮತ್ತು ಹಲಗೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ತಡರಾತ್ರಿ ಸುರಿದ ಅಕಾಲಿಕ ಮಳೆ ಅಪಾರ ಪ್ರಮಾಣದ ಭತ್ತದ ಫಸಲು ಹಾನಿಗೊಳಿಸಿದೆ. ಪರಿಣಾಮವಾಗಿ ಲಕ್ಷಾಂತರ ಮೌಲ್ಯದ ಭತ್ತ ಮತ್ತು ಹುಲ್ಲು ನೀರು ಪಾಲಾಯಿತು.
ಸಮೀಪದ ಅಂತರವಳ್ಳಿ, ಹುಲ್ಲಹಳ್ಳಿ, ಹುಲ್ಲಾಗಾಲ, ಬೆಳತೂರು, ಹೊಸಪುರ, ಹುಸ್ಕೂರು, ಯತ್ತಂಬಾಡಿ, ಬಾಣಸಮುದ್ರ, ಚೆನ್ನೀಪುರ, ಹಾಡ್ಲಿ, ಡಿ.ಹಲಸಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಮಳೆಯಾಗಿದೆ. ಕೊಯ್ಲಿಗೆ ಬಂದಿದ್ದ ಭತ್ತದ ಫಸಲನ್ನು ರೈತರು ಕಟಾವು ಮಾಡಿದ್ದರು. ಗುರುವಾರ ತಡರಾತ್ರಿ ಸುರಿದ ಮಳೆಯಿಂದ ಗದ್ದೆಯಲ್ಲಿ ನೀರು ತುಂಬಿ ಭತ್ತದ ಸಮೇತ ಹುಲ್ಲು ನೀರು ಪಾಲಾಗಿದೆ.
ಕಷ್ಟ ಪಟ್ಟು ದುಡಿಮೆ ಮಾಡಿದ್ದ ರೈತನಿಗೆ ಫಸಲು ಇನ್ನೇನು ಕೈ ಸೇರಬೇಕು ಎನ್ನುವಷ್ಟರಲ್ಲಿ ಪ್ರಕೃತಿ ವಿಕೋಪ ಆಘಾತ ಉಂಟು ಮಾಡಿದೆ. ಶುಕ್ರವಾರ ರಾತ್ರಿ ಮತ್ತೆ ಮಳೆ ಮುಂದುವರೆದರೇ, ಮತ್ತಷ್ಟು ನಷ್ಟ ಅನುಭವಿಸುವುದು ಖಚಿತ. ಮಳೆಗಾಗಿ ಬೇಡುತ್ತಿದ್ದ ರೈತರು ಇಂದು ಮಳೆ ಬಾರದಿದ್ದರೇ ಸಾಕು ಎಂದು ಪ್ರಾರ್ಥಿಸುತ್ತಿದ್ದಾರೆ.
‘ವ್ಯವಸಾಯ ಮಾಡುವುದೇ ದುಸ್ತರವಾಗಿದೆ. ಸಾಲ ಮಾಡಿ ಭತ್ತ ನಾಟಿ ಮಾಡಿದ್ದೆವು. ಉತ್ತಮ ಫಸಲು ಬಂದಿದ್ದು, ಕಟಾವು ಮಾಡಿದ್ದೆವು. ಅಕಾಲಿಕ ಮಳೆ ನಮ್ಮ ತುತ್ತಿನ ಚೀಲಕ್ಕೆ ತಣ್ಣೀರು ಎರಚಿದೆ’ ಎಂದು ಹೊಸಪುರ ಗ್ರಾಮದ ಯುವ ರೈತ ಮಹಿಳೆ ನಿಂಗಮ್ಮ ಬೋರಯ್ಯ ಕಣ್ಣೀರಾದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಮಳೆಗೆ ಸಾವಿರಾರು ಎಕರೆಯಲ್ಲಿ ಕಟಾವು ಮಾಡಿದ್ದ ಭತ್ತ ಹಾನಿಗೀಡಾಗಿದೆ. ಪ್ರಕೃತಿ ವಿಕೋಪದಿಂದಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ನಷ್ಟಹೊಂದಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮನು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.