ADVERTISEMENT

ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ: ಶ್ರೀರಂಗಪಟ್ಟಣದಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 6:03 IST
Last Updated 16 ಡಿಸೆಂಬರ್ 2021, 6:03 IST
ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ
ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ   

ಮಂಡ್ಯ: ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಅಂಗವಾಗಿ ಇಂದು ಶ್ರೀರಂಗಪಟ್ಟಣದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ಧಾರೆ. ಗಂಜಾಂನಿಂದ ಆರಂಭಗೊಳ್ಳಲಿರುವ ಮಾಲಾಧಾರಿಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿ ರಂಗನಾಥ ಸ್ವಾಮಿ ದೇವಾಲಯ ತಲುಪಲಿದೆ.

ಹಿಂದೂ ಜಾಗರಣ ವೇದಿಕೆ ವತಿಯಿಂದ ಸಂಕೀರ್ತನಾ ಯಾತ್ರೆ ನಡೆಯುತ್ತಿದ್ದು ಪಟ್ಟಣದಾದ್ಯಂತ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ರಾಜ್ಯದ ವಿವಿಧೆಡೆಯಿಂದ ಬಂದಿರುವ ಸಾವಿರಾರು ಹನುಮಾನ್‌ ಮಾಲಾಧಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಇಬ್ಬರು ಎಎಸ್ಪಿ, ಐವರು ಡಿವೈಎಸ್‌ಪಿ, 30 ಮಂದಿ ಸಿಪಿಐ, 60 ಮಂದಿ ಪಿಎಸ್‌ಐಗಳು, ಸಾವಿರಕ್ಕೂ ಹೆಚ್ಚು ಕಾನ್‌ಸ್ಟೆಬಲ್‌, 5 ಕೆಎಸ್‌ಆರ್‌ಪಿ ತುಕಡಿ, 14 ಡಿಎಆರ್‌ ತುಕಡಿ, 1 ಕ್ಯೂಆರ್‌ಟಿ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ADVERTISEMENT

ಮಸೀದಿಗೆ ಭದ್ರತೆ: ಸಂಕೀರ್ತನಾ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಜಾಮೀಯಾ ಮಸೀದಿ ಮೇಲೆ ದಾಳಿ ನಡೆಸಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಳೆದೊಂದು ವಾರದಿಂದ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮಸೀದಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮಸೀದಿ ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.

'ವಿವಿಧ ಸಮುದಾಯ, ಸಂಘಟನೆಗಳ ಶಾಂತಿ ಸಭೆ ನಡೆಸಲಾಗಿದೆ, ಸ್ಥಳೀಯವಾಗಿ ಕೋಮು ಸೌಹಾರ್ದ ಚೆನ್ನಾಗಿದೆ. ಹೊರಗಿನ ಜನರು ಶಾಂತಿ ಕದಡಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲ ತಾಣಗಳಲ್ಲಿ ಸೌಹಾರ್ದ ಕೆಡಿಸುವ ಸಂದೇಶ ಹಾಕಿದವರನ್ನು ಕೂಡಲೇ ಬಂಧಿಸಲಾಗುವುದು' ಎಂದು ಎಸ್ಪಿ ಯತೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.