ADVERTISEMENT

ಶಾಸಕರೆದುರೇ ಕಣ್ಣೀರಿಟ್ಟ ರಸಾಯನಶಾಸ್ತ್ರ ಉಪನ್ಯಾಸಕ

ಮದ್ದೂರಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 11:56 IST
Last Updated 13 ಆಗಸ್ಟ್ 2021, 11:56 IST
ಮದ್ದೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರದ ಉಪನ್ಯಾಸಕ ವಿ.ಕೆ.ಶಿವಾನಂದ ಶಾಸಕ ಡಿ.ಸಿ.ತಮ್ಮಣ್ಣ ಎದುರೇ ಕಣ್ಣೀರಿಟ್ಟರು
ಮದ್ದೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರದ ಉಪನ್ಯಾಸಕ ವಿ.ಕೆ.ಶಿವಾನಂದ ಶಾಸಕ ಡಿ.ಸಿ.ತಮ್ಮಣ್ಣ ಎದುರೇ ಕಣ್ಣೀರಿಟ್ಟರು   

ಮದ್ದೂರು: ‘ಕಾಲೇಜಿನ ಪ್ರಾಂಶುಪಾಲರು ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಉಪನ್ಯಾಸಕರೊಬ್ಬರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಾಸಕರ ಎದುರೇ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಆಗಮಿಸಿದ್ದ ಶಾಸಕರ ಎದುರು ರಸಾಯನಶಾಸ್ತ್ರದ ಉಪನ್ಯಾಸಕ ವಿ.ಕೆ.ಶಿವಾನಂದ ಅವರು ಅಳಲು ತೋಡಿಕೊಂಡರು. ‘ಕಾಲೇಜಿನಲ್ಲಿ ಪ್ರಾಂಶುಪಾಲ ಪಾಪಯ್ಯನವರು ಜಾತೀಯತೆ ಮಾಡುತ್ತಿದ್ದು, ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡು ಉಪನ್ಯಾಸಕರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದರೂ ಸುಮ್ಮನೆ ನಮ್ಮನ್ನು ಹಿಯ್ಯಾಳಿಸುತ್ತಾರೆ. ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರಿಗೆ, ಸಿಬ್ಬಂದಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಕಾಲೇಜಿನ ವಾತಾವರಣ ಹದಗೆಟ್ಟಿದೆ. ಸಮಸ್ಯೆಯನ್ನು ಬಗೆಹರಿಸಬೇಕು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಮ್ಮಣ್ಣ, ‘ಕಾರ್ಯಕ್ರಮ ಮುಗಿದ ಬಳಿಕ ಈ ಬಗ್ಗೆ ಮಾತನಾಡೋಣ. ಯಾರು ಯಾವ ಜಾತಿ ವಿರುದ್ಧವೂ ಮಾತನಾಡಬಾರದು. ಕಾಲೇಜಿನಲ್ಲಿಯೇ ಈ ರೀತಿಯಾದರೆ ವಿದ್ಯಾರ್ಥಿಗಳು ಏನು ಕಲಿಯುತ್ತಾರೆ? ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT