
ಮಂಡ್ಯ: ಸರ್ಕಾರ ನೂತನವಾಗಿ ಅನುಷ್ಠಾನಗೊಳಿಸಿರುವ ‘ಸಮಗ್ರ ಆರೋಗ್ಯ ಕರ್ನಾಟಕ ಯೋಜನೆ’ಯ ಕಾರ್ಡ್ (ಯೂನಿವರ್ಸಲ್ ಹೆಲ್ತ್ ಕಾರ್ಡ್) ಪಡೆಯಲು ಜಿಲ್ಲಾಸ್ಪತ್ರೆಯಲ್ಲಿ ನೂಕುನುಗ್ಗಲು ಉಂಟಾಗಿದೆ. ಹೊರರೋಗಿಗಳ ವಿಭಾಗದಲ್ಲಿ ಮೂರು ದಿನಗಳಿಂದ ಕಾರ್ಡ್ ವಿತರಣಾ ಕಾರ್ಯ ನಡೆಯುತ್ತಿದ್ದು ಬಿಪಿಎಲ್, ಎಪಿಎಲ್ ಕಾರ್ಡ್‌ವುಳ್ಳ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದಾರೆ.
ಯಶಸ್ವಿನಿ ಸೇರಿ ಹಲವು ಆರೋಗ್ಯ ಯೋಜನೆಗಳನ್ನು ಆರೋಗ್ಯ ಕರ್ನಾಟಕದ ಜೊತೆ ವಿಲೀನಗೊಳಿಸಲಾಗಿದ್ದು ಸೇವೆಯನ್ನು ಒಂದೇ ಸೂರಿನಡಿ ತರಲು ಸರ್ಕಾರ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಉಳ್ಳವರಿಗೆ ನೂತನ ಕಾರ್ಡ್ ವಿತರಿಸಲಾಗುತ್ತಿದೆ. ಆದರೆ ಏಕಾಏಕಿ ಸಾವಿರಾರು ಜನರು ಕಾರ್ಡ್‌ಗಾಗಿ ಬೇಡಿಕೆ ಇಡುತ್ತಿರುವ ಕಾರಣ ಸಮಸ್ಯೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಕೌಂಟರ್ ತೆರೆಯಲಾಗಿದ್ದು ಮೂರು ಕೌಂಟರ್‌ಗಳಲ್ಲಿ ದಾಖಲಾತಿ ಪರಿಶೀಲನೆ ನಡೆಯುತ್ತಿದೆ. ಒಂದು ಕೌಂಟರ್‌ನಲ್ಲಿ ಕಾರ್ಡ್ ಮುದ್ರಿಸಿ ವಿತರಣೆ ಮಾಡಲಾಗುತ್ತಿದೆ.
‘ಜಿಲ್ಲಾಸ್ಪತ್ರೆ ದಿನಕ್ಕೆ 250 ಕಾರ್ಡ್ ವಿತರಣೆಯ ಗುರಿ ಹೊಂದಿತ್ತು. ಆದರೆ ಸಾವಿರಕ್ಕೂ ಹೆಚ್ಚು ಜನರು ಬರುತ್ತಿರುವ ಕಾರಣ ಕಾರ್ಡ್ ವಿತರಣೆ ಕಷ್ಟವಾಗುತ್ತಿದೆ. ಒಂದು ಕೌಂಟರ್‌ನಲ್ಲಿ ಮುದ್ರಿಸಿ, ವಿತರಿಸಲು ಸಾಧ್ಯವಾಗುತ್ತಿಲ್ಲ. ಜನರು ನಮ್ಮ ವಿರುದ್ಧ ಜಗಳಕ್ಕೆ ಇಳಿಯುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ ಏಳು ಗಂಟೆಯವರೆಗೂ ವಿತರಣೆ ಮಾಡುತ್ತಿದ್ದೇವೆ’ ಎಂದು ಕಾರ್ಡ್ ವಿತರಣೆ ಸಿಬ್ಬಂದಿಯೊಬ್ಬರು ತಿಳಿಸಿದರು. ‘ಕಾರ್ಡ್ ವಿತರಿಸಲು ಇನ್ನೂ ಹೆಚ್ಚಿನ ಕೌಂಟರ್ ತೆರೆಯಬೇಕಾಗಿತ್ತು. ಈ ರೀತಿ ಜನರನ್ನು ಸಾಲಿನಲ್ಲಿ ನಿಲ್ಲಿಸಿಕೊಂಡಿರುವುದರಿಂದ ಜನರಿಗೆ ಹಿಂಸೆಯಾಗುತ್ತಿದೆ’ ಎಂದು ಮಾನವ ಹಕ್ಕುಗಳ ತರಬೇತುದಾರ, ವಕೀಲ ಗುರುಪ್ರಸಾದ್ ಹೇಳಿದರು.
ಒಪಿಡಿಗೆ ಸಮಸ್ಯೆ:
ಹೊರರೋಗಿ ವಿಭಾಗದಲ್ಲಿ ಕಾರ್ಡ್ ವಿತರಣೆ ಮಾಡುತ್ತಿದ್ದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸಮಸ್ಯೆಯಾಗಿದೆ. ಚೀಟಿ ಪಡೆಯಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಉಂಟಾಗಿದೆ. ಆಸ್ಪತ್ರೆ ಸಿಬ್ಬಂದಿ ಬದಲಿ ವ್ಯವಸ್ಥೆ ಮಾಡದ ಕಾರಣ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆ ಆವರಣ ಗೊಂದಲದ ಗೂಡಾಗಿದೆ.
ಯಾರಿಗೆ ಸಿಗುತ್ತೆ ಕಾರ್ಡ್:
ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ಆರ್‌ಎಸ್‌ಬಿವೈ ಮುಂತಾದ ಆರೋಗ್ಯ ಯೋಜನೆಗಳಿಂದ ಉಂಟಾಗುತ್ತಿದ್ದ ನಷ್ಟ ತಡೆಯಲು ಮುಂದಾಗಿರುವ ಸರ್ಕಾರ ಎಲ್ಲಾ ಯೋಜನೆಗಳನ್ನು ಒಂದೇ ಸೂರಿನಡಿ ತಂದು ಆರೋಗ್ಯ ಕರ್ನಾಟಕ ಯೋಜನೆ ರೂಪಿಸಿದೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಉಳ್ಳವರು ಈ ಕಾರ್ಡ್ ಪಡೆಯಲು ಅರ್ಹತೆ ಪಡೆಯುತ್ತಾರೆ. ಬಿಪಿಎಲ್ ಕಾರ್ಡ್ ಉಳ್ಳವರು ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯುತ್ತಾರೆ. ಎಪಿಎಲ್ ಕಾರ್ಡ್‌ನಲ್ಲಿ ಶೇ 70ರಷ್ಟು ಚಿಕಿತ್ಸಾವೆಚ್ಚವನ್ನು ರೋಗಿಗಳು ಭರಿಸಿದರೆ ಶೇ 30ರಷ್ಟು ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಬಿಪಿಎಲ್, ಎಪಿಎಲ್ ಪುಸ್ತಕದಲ್ಲಿರುವ ಎಲ್ಲಾ ಸದಸ್ಯರು ಪ್ರತ್ಯೇಕವಾಗಿ ಕಾರ್ಡ್ ಪಡೆಯಬೇಕು. ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಪ್ರತಿ ಸದಸ್ಯರು ಬೆರಳಚ್ಚು ನೀಡಬೇಕು.
ಖಾಸಗಿ ಆಸ್ಪತ್ರೆಗೆ ನೇರ ಭೇಟಿ ಇಲ್ಲ:
ಯಶಸ್ವಿನಿ ಕಾರ್ಡ್ ಇದ್ದಾಗ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಅವಕಾಶವಿತ್ತು. ಆದರೆ ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಗಂಭೀರ ಆರೋಗ್ಯ ಸಮಸ್ಯೆ ಇದ್ದಾಗ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾದಾಗ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗೆ ಕಳುಹಿಸಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞರ ಕೊರತೆ ಇದ್ದಾಗ, ಆಧುನಿಕ ವೈದ್ಯಕೀಯ ಉಪಕರಣ ಇಲ್ಲದಿದ್ದಾಗ ಮಾತ್ರ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗೆ ಕಳುಹಿಸಬಹುದು ಎಂಬ ಮಾಹಿತಿ ಆರೋಗ್ಯ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.