ಕೆ.ಆರ್.ಪೇಟೆ: ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ಶ್ರೀಕ್ಷೇತ್ರದಲ್ಲಿ ದನಗಳ ಜಾತ್ರೆಯು ಮೈದೆಳೆದಿದ್ದು, ಜಾತ್ರಾಮಾಳ ರೈತರು ಮತ್ತು ದನಗಳಿಂದ ತುಂಬಿಹೋಗಿದ್ದು, ಹೇಮಗಿರಿ ಬೆಟ್ಟದ ಸುತ್ತಲೂ ಎಲ್ಲಿ ನೋಡಿದರಲ್ಲಿ ದನಗಳದ್ದೇ ಕಾರುಬಾರು.
ದೂರ-ದೂರದ ಊರುಗಳಿಂದ ಆಗಮಿಸಿರುವ ರೈತರು ತಾವು ಸಾಕಿನ ದನ ಕರುಗಳೊಂದಿಗೆ ಜಾತ್ರಾ ಮಾಳದಲ್ಲಿ ಕಳೆದ ಐದಾರು ದಿನಗಳಿಂದ ಬೀಡು ಬಿಟ್ಟಿದ್ದು ಹೇಮಾವತಿ ನದಿ ದಂಡೆ ದನಗಳ ಹಿಂಡಿನಿಂದ ತುಂಬಿ ಹೋಗಿದೆ.
ಪ್ರತಿವರ್ಷ ಹೇಮಗಿರಿಯಲ್ಲಿ ಜಾತ್ರೆ ನಡೆಯುತಿದ್ದು ಇಲ್ಲಿ ನಡೆಯುವ ದನಗಳ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ಕಲ್ಯಾಣ ವೆಂಕಟರಮಣಸ್ವಾಮಿ ಅವರ ಸಾನ್ನಿಧ್ಯವಿರುವ ಈ ಬೆಟ್ಟದಲ್ಲಿ ಭೃಗು ಮಹರ್ಷಿಗಳು ಪ್ರತಿಷ್ಠಾಪಿಸಿದ ತಿರುಪತಿ ತಿಮ್ಮಪ್ಪನನ್ನೇ ಹೋಲುವ ವಿಗ್ರಹ ಇದ್ದು ಬೆಟ್ಟದ ಮೇಲೆ ದೇವಸ್ಥಾನ ಇದೆ. ಸಾಕ್ಷಾತ್ ಮಹಾ ವಿಷ್ಣವೇ ಇಲ್ಲಿನ ನಯನ ಮನೋಹರ ದೃಶ್ಯಕ್ಕೆ ಶರಣಾಗಿ ನೋಡಲು ಬರುತ್ತಿದ್ದನೆಂದು, ಭೃಗು ಮಹರ್ಷಿಗಳು ತಪಸ್ಸು ಮಾಡಿ ಶ್ರೀಮನ್ನಾರಾಯಣನನ್ನು ತಪಸ್ಸು ಮಾಡಿ ಒಲಿಸಿಕೊಂಡ ಸ್ಥಳವೂ ಇದಾಗಿದೆ ಎಂದು ಪುರಾಣಗಳು ತಿಳಿಸುತ್ತವೆ.
ತಿಂಗಳುಗಟ್ಟಲೆ ದನಗಳ ಜಾತ್ರೆ ನಡೆಯುತಿತ್ತು. ಈಗ ಒಂದು ವಾರ ದನಗಳು ಕಟ್ಟಿದ್ದರೆ ಅದೇ ದೊಡ್ಡದು ಎನ್ನುತ್ತಾರೆ ಬಂಡಿಹೊಳೆಯ ರೈತ ಮಹದೇವೇಗೌಡ. ಚುಂಚನಗಿರಿ ಜಾತ್ರೆಗೆ ಬಂದ ರೈತರು ಹೇಮಗಿರಿ ಜಾತ್ರೆಗೆ ಆಗಮಿಸಿ ಐದಾರು ದಿನ ಕಟ್ಟಿ ತೆರಳುವದು ವಾಡಿಕೆಯಾಗಿದೆ. ಈ ಬಾರಿ ಜ.26ರಿಂದಲೇ ದನಗಳ ಜಾತ್ರೆ ಆರಂಭವಾಗಿದ್ದು ಹಳ್ಳಿಕಾರ್ ತಳಿಯ ರಾಸುಗಳು ಸಾವಿರಾರು ಸಂಖ್ಯೆಯಲ್ಲಿ ಬೀಡು ಬಿಟ್ಟಿವೆ.
ಬಂಡೀಹೊಳೆ ಗ್ರಾಮದ ಬಿ.ಆರ್. ದರ್ಶನ್ ಎನ್ನುವವರಿಗೆ ಸೇರಿದ ಸುಮಾರು ₹3.5 ಲಕ್ಷ ಬೆಲೆ ಬಾಳುವ ಹಳ್ಳಿಕಾರ್ ಎತ್ತುಗಳು ಜಾತ್ರೆಯಲ್ಲಿ ಗಮನ ಸೆಳೆಯುತ್ತಿವೆ. ಬೆಟ್ಟದ ತಪ್ಪಲಿನಲ್ಲಿ ನೂರಾರು ಸಂಖ್ಯೆಯಲ್ಲಿ ಕಡ್ಲೆಪುರಿ ಮಿಠಾಯಿ ಅಂಗಡಿಗಳ ಸಾಲು ಸಾಲು ಇದೆ. ಫೆ.5ರಂದು ರಥೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.