ADVERTISEMENT

ಮಂಡ್ಯ | ಹಿಂದೂಗಳು ಒಗ್ಗಟ್ಟಾಗಿ ಜಾತಿಗಣತಿ ವಿರೋಧಿಸಿ: ಚಕ್ರವರ್ತಿ ಸೂಲಿಬೆಲೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 16:01 IST
Last Updated 12 ಏಪ್ರಿಲ್ 2025, 16:01 IST
   

ಮಂಡ್ಯ: ‘ಜಾತಿಗಣತಿ ಮಾಡಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ ಅಂತ ತೋರಿಸುತ್ತಾರೆ. ನಂತರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೊಡಿ, ಮೀಸಲಾತಿ ಕೊಡಿ ಎಂದು ಕೇಳುತ್ತಾರೆ. ಎಲ್ಲರೂ ಒಗ್ಗೂಟ್ಟಾಗಿ ಈ ಜಾತಿಗಣತಿಯನ್ನು ವಿರೋಧಿಸಬೇಕು’ ಎಂದು ಯುವ ಬ್ರಿಗೆಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. 

ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ ಮತ್ತು ಶ್ರೀರಾಮಾಂಜನೇಯ ಮಹೋತ್ಸವ ಸಮಿತಿ ಸಹಯೋಗದಲ್ಲಿ ಹನುಮ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೊಡ್ಡನಂಜೇಗೌಡ –ಉರೀಗೌಡ ಎಂದು ವೇದಿಕೆಗೆ ಹೆಸರಿಟ್ಟು, ಅವರ ಭಾವಚಿತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು. 

ಹಿಂದೂ ಸಮುದಾಯವನ್ನು ಒಡೆದರೆ ಮತ ಬರುತ್ತವೆ ಎಂಬುದು ರಾಜಕಾರಣಿಗಳಿಗೆ ಗೊತ್ತು. ಜಾತಿಗಣತಿ ಮಾಡಲು ಯಾರಾದರೂ ಮನೆ ಬಳಿ ಬಂದರೆ ‘ಹಿಂದೂ’ ಅಂತ ಹೇಳಿ. ‘ನಾವೆಲ್ಲ ಹಿಂದೂ– ನಾವೆಲ್ಲ ಒಂದು’ ಎನ್ನುವ ಭಾವನೆ ಬರಬೇಕು. ಮಂಡ್ಯದ ಶೋಭಾಯಾತ್ರೆ ಮುಂದೆ ದೊಡ್ಡಮಟ್ಟದ ಬದಲಾವಣೆ ತರಲಿದೆ ಎಂದರು. 

ADVERTISEMENT

ಹಿಂದೂ ಧರ್ಮದಲ್ಲಿ ಸಾಕಷ್ಟು ಜಾತಿಗಳಿವೆ. ಈಗ ಜಾತಿ ಹೇಳದಿದ್ರೆ ಹಿಂದೂ ಅನ್ನೋದಿಲ್ಲ. ನಾನು ಸಾಕಷ್ಟು ಕಡೆ ಹೋದಾಗ ನನ್ನ ಜಾತಿ ಹುಡುಕುವ ಕೆಲಸ ಆಗುತ್ತದೆ. ಆದರೆ ನನ್ನ ಜಾತಿ ಯಾವುದು ಅಂತ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ನಾನು ಹಿಂದೂ ಜಾತಿ, ಎಲ್ಲಿಹೋದ್ರೂ ಹಿಂದೂ ಅನ್ನೋದೇ ನನ್ನ ಗುರುತು ಎಂದರು.

ಮಂಡ್ಯದಲ್ಲಿ ಕೇಸರಿ ಟವಲ್ ಹಾಕಲು ಯಾರೂ ಭಯ ಪಡಬೇಡಿ. ಯಾರು ಏನು ಮಾಡ್ತಾರೋ, ಪೊಲೀಸರು ಕೇಸ್ ಹಾಕಿಬಿಡ್ತಾರೋ ಅನ್ನುವ ಭಯ ಬೇಡ. ಇಂತಹ ಸಾವಿರಾರು ಕೇಸ್‌ಗಳನ್ನು ನಾವು ನೋಡಿದ್ದೇವೆ. ಹೆಮ್ಮೆಯಿಂದ ಕೇಸರಿ ಟವಲ್ ಹಾಕಿಕೊಳ್ಳಿ. ಕೇಸರಿ ತಿಲಕವನ್ನ ಇಡಲು ಹೆದರಬೇಡಿ. ಚಾಣಕ್ಯ ಹಿಂದೂ ರಾಷ್ಟ್ರದ ಬ್ರ್ಯಾಂಡ್‌ ಎಂದರು. 

ಹಿಂದೂ ಸಮಾಜ ಜಗತ್ತಿಗೆ ಲೆಕ್ಕವಿಲ್ಲದಷ್ಟು ಕೊಡುಗೆ ನೀಡಿದೆ. ಇದನ್ನು ನೂರಾರು ಪುಟಗಳಲ್ಲಿ ಬರೆಯಬಹುದು. ಆದರೆ, ಮುಸ್ಲಿಮರು ಜಗತ್ತಿಗೆ ಕೊಟ್ಟ ಕೊಡುಗೆ ಏನು? ಎಂಬುದನ್ನು 20 ಪುಟ ಕೂಡ ಬರೆಯಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯಕ್ಕೆ ಕೊಲೆ, ರಕ್ತಪಾತ ಅಂಟಿಕೊಂಡಿದೆ. ಕುರಾನ್‌, ಪೈಗಂಬರ್ ಬಗ್ಗೆ ಯಾರಾದ್ರೂ ಟೀಕೆ ಮಾಡಿದ್ರೆ ಅವರು ತಲೆ ಕಡಿಯುತ್ತಾರೆ. ಆದರೆ ಭಗವದ್ಗೀತೆ, ಶ್ರೀರಾಮನನ್ನು ಟೀಕೆ ಮಾಡಿದ್ರೆ ಹಿಂದೂಗಳು ನಿಂತು ನಗುತ್ತಾರೆ. ಮತ್ತೆ ಹೋಗಿ ಶ್ರೀರಾಮನ ಮುಂದೆ ಪೂಜೆ ಮಾಡ್ತಾರೆ. ಹಿಂದೂ ಧರ್ಮದಿಂದ ಅನ್ಯ ಧರ್ಮಗಳಿಗೆ ಮತಾಂತರ ಹೊಂದುವವರಿಗೆ ಹಿಂದೂ ಧರ್ಮದ ತಾಕತ್ತು ಗೊತ್ತಿಲ್ಲ ಎಂದು ಹೇಳಿದರು. 

ನಮ್ಮ ಮುಂದೆ ದೊಡ್ಡ ಸವಾಲು ಇದೆ. ಹೊಸ ಭಾರತವನ್ನು ಕಟ್ಟಲು ಶ್ರಮಿಸಬೇಕಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ತುಷ್ಟೀಕರಣ ಮಾಡಿ ಮುಸಲ್ಮಾನರನ್ನು ಮೇಲಕ್ಕೇರಿಸಿದ್ರು. ಈಗ ಅವರನ್ನು ಕೆಳಗಿಳಿಸುವ ಪರಿಸ್ಥಿತಿ ಬಂದಿದೆ. ಗಾಂಧೀಜಿಯವರ ‘ರಘುಪತಿ ರಾಘವ ರಾಜಾರಾಂ’ ಭಜನೆ ತುಂಡರಿಸಿ, ಈಶ್ವರ ಅಲ್ಲಾ ತೇರೆ ನಾಮ್‌ ಸೇರಿಸಿದ್ರು. ಈಗಲೂ ಎಲ್ಲಾ ಕಾರ್ಯಕ್ರಮದಲ್ಲಿ ಇದನ್ನು ಹಿಂದೂಗಳು ಬಳಸ್ತಾರೆ. ಆದರೆ, ಮಸೀದಿಯಲ್ಲಿ ಇದನ್ನು ಬಳಸುತ್ತಾರಾ‌ ಎಂದು ಪ್ರಶ್ನಿಸಿದರು.

ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಭಾನುಪ್ರಕಾಶ್ ಶರ್ಮ ಅಧ್ಯಕ್ಷತೆ ವಹಿಸಿದ್ದರು. ವಿ.ಎಚ್‌.ಪಿ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ರಾಘವೇಂದ್ರ ಕೆ.ಪುಣ್ಯಕೋಟಿ, ಬಲರಾಮೇಗೌಡ, ರಾಜಶೇಖರ, ಬಸವರಾಜು ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.