ADVERTISEMENT

ಪಾಂಡವಪುರದ ಜೀವ ‘ಹಿರೋಡೆ’ ಕೆರೆ ಒಡಲಲ್ಲಿ ಐತಿಹಾಸಿಕ ಪರಂಪರೆ

ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಜಮೀನಿಗೂ ನೀರು

ಹಾರೋಹಳ್ಳಿ ಪ್ರಕಾಶ್‌
Published 6 ಜುಲೈ 2019, 19:30 IST
Last Updated 6 ಜುಲೈ 2019, 19:30 IST
ಪಾಂಡವಪುರ ಪಟ್ಟಣದ ಸಮೀಪ ಇರುವ ಹಿರೋಡೆ ಕೆರೆಯ ನೋಟ
ಪಾಂಡವಪುರ ಪಟ್ಟಣದ ಸಮೀಪ ಇರುವ ಹಿರೋಡೆ ಕೆರೆಯ ನೋಟ   

ಪಾಂಡವಪುರ: ನಾಗರಿಕತೆ ಆರಂಭವಾಗುವುದೇ ನದಿ, ಕೆರೆ, ಕಟ್ಟೆಗಳಿಂದ. ನಾಗರಿಕತೆಯ ವೈಭವವನ್ನು ನೆನಪು ಮಾಡುವ ಪಳಿಯುಳಿಕೆಗಳು ಈ ಆಧುನಿಕ ಜಗತ್ತಿನಲ್ಲೂ ದೊರೆಯುತ್ತವೆ. ತಾಲ್ಲೂಕಿನ ‘ಹಿರೋಡೆ’ ಕೆರೆ ನವಶಿಲಾಯುಗದ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಮೂಲಕ ಬೆರಗು ಮೂಡಿಸುತ್ತವೆ.

ಹಿರೋಡೆ ಕೆರೆ ಹಾಗೂ ಇದಕ್ಕೆ ಹೊಂದಿಕೊಂಡಿರುವ ಕುಂತಿಬೆಟ್ಟದ ಬಗ್ಗೆ ಇತಿಹಾಸ ತಜ್ಞ ರಾಬರ್ಟ್ ಬ್ರೂಸಿ ಪೂಬ್‌ ಅವರು ಹಲವು ವಿಷಯ ಸಂಗ್ರಹಿಸಿದ್ದಾರೆ. ಅವರ ಸಂಗ್ರಹಗಳು ಈಗಲೂ ಮದ್ರಾಸ್‌ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ. ಐತಿಹಾಸಿಕ ಹಿನ್ನೆಲೆಯ ಪ್ರಕಾರ ಪಾಂಡವಪುರ ಎಂದು ಹೆಸರು ಬರುವ ಮೊದಲು ‘ಹಿರೋಡೆ’ ಎಂಬ ಹೆಸರಿತ್ತು. ಅಲ್ಲಿದ್ದ ಕೆರೆ ಹಿರೋಡೆ ಕೆರೆ ಎಂದೇ ಪ್ರಸಿದ್ಧಿ ಪಡೆಯಿತು.

ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಶ್ರೀರಂಗಪಟ್ಣದ ಟಿಪ್ಪು ಸುಲ್ತಾನ್‌ಗೆ ಸಹಾಯ ಮಾಡಲು ಮಾಡಲು ಫ್ರೆಂಚ್‌ ಸೈನಿಕರು ಈ ಕೆರೆಯ ಬಳಿ ಬೀಡುಬಿಟ್ಟಿದ್ದರು. ಹೀಗಾಗಿ ಅದನ್ನು ‘ದಂಡು’ ಎಂತಲೂ ಕರೆಯುತ್ತಿದ್ದರು. ನಂತರ ‘ಫ್ರೆಂಚ್‌ರಾಕ್ಸ್‌’ ಎಂದು ಹೆಸರು ಪಡೆಯಿತು. ಸ್ವಾತಂತ್ರ್ಯ ನಂತರ ಪಾಂಡವಪುರ ಎಂದಾಯಿತು ಎಂದು ಇತಿಹಾಸ ಹೇಳುತ್ತದೆ.

ADVERTISEMENT

ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಿರೋಡೆ ಕೆರೆ ಬತ್ತಿದ ದಿನಗಳೇ ಇಲ್ಲ. ಬೇಸಿಗೆಯಲ್ಲೂ ನೀರು ತುಂಬಿಕೊಂಡಿರುವ ಈ ಕೆರೆ ಸುಮಾರು 360 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆಯು ಪಟ್ಟಣ, ದೇವೇಗೌಡನಕೊಪ್ಪಲು, ಚಿಕ್ಕಾಡೆ ಗ್ರಾಮಗಳ ರೈತರ 600 ಎಕರೆ ಜಮೀನಿಗೆ ನೀರು ಒದಗಿಸುತ್ತಿದೆ. ಇದಲ್ಲದೆ ಹಿರೇಮರಳಿ ಗ್ರಾಮದ ರೈತರ 230 ಎಕರೆ ಜಮೀನಿಗೆ ಏತನೀರಾವರಿಯನ್ನು ಕಲ್ಪಿಸಿದೆ. ಹಿರೋಡೆ ಕೆರೆಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದೂ ಉಂಟು. ಸುಮಾರು 85 ಎಕರೆ ಕೆರೆಯ ಒತ್ತುವರಿಯನ್ನು ತಾಲ್ಲೂಕು ಆಡಳಿತ ತೆರವುಗೊಳಿಸಿದೆ.

ಕೆರೆಯ ಅಭಿವೃದ್ದಿ: 2002ರಲ್ಲಿ ಅತಿ ಹೆಚ್ಚು ಮಳೆ ಬಿದ್ದು ಕೆರೆ ಒಡೆದುಹೋಗಿ ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ನಷ್ಟ ಉಂಟಾಗಿತ್ತು. ಸರ್ಕಾರ ಸುಮಾರು ₹ 50ಲಕ್ಷ ಹಣದಲ್ಲಿ ಕೆರೆಯನ್ನು ದುರಸ್ತಿಗೊಳಿಸಿತ್ತು. 2017ರಲ್ಲಿ ₹ 10ಲಕ್ಷ ಅನುದಾನದಲ್ಲಿ ಕೆರೆಯಲ್ಲಿ ತುಂಬಿಕೊಂಡಿದ್ದ ಹೂಳು ತೆಗೆಯಲಾಯಿತು.

‘ಕೆರೆಯಲ್ಲಿ ಮತ್ತಷ್ಟು ಹೂಳು ತುಂಬಿಕೊಂಡಿದೆ. ಅದನ್ನೂ ತೆಗೆಸಿ ಕೆರೆಯ ಏರಿ ಮತ್ತು ತೂಬಿನ ಮಟ್ಟವನ್ನು ಹೆಚ್ಚಿಸಿದರೆ ನೀರಿನ ಸಂಗ್ರಹ ಮಟ್ಟವನ್ನು ಹೆಚ್ಚಿಸಬಹುದು. ಆ ಮೂಲಕ ಕೃಷಿಗೆ ಮತ್ತಷ್ಟು ಅನುಕೂಲವಾಗುತ್ತದೆ’ ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.

ಮೀನುಗಾರಿಕೆ: ಸರ್ಕಾರದ ಅನುಮತಿ ಪಡೆದು ಹಿರೋಡೆ ಕರೆಯಲ್ಲಿ ಮೀನು ಸಾಕಾಣಿಕೆ ಮತ್ತು ಮೀನು ಮಾರಾಟ ಮಾಡಲಾಗುತ್ತದೆ. ವರ್ಷದಲ್ಲಿ ಸರಾಸರಿ 2ರಿಂದ3 ಟನ್‌ ಮೀನು ಉತ್ಪಾದನೆ ಮಾಡಲಾಗುತ್ತಿದೆ. ‘ಕೆರೆಯನ್ನು ಅಭಿವೃದ್ಧಿಪಡಿಸಿದರೆ ಮೀನುಸಾಕಾಣಿಕೆ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ’ ಎಂದು ಪಟ್ಟಣದ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಸಗಾಯ್‌ ಹೇಳುತ್ತಾರೆ.

ಕೆರೆಯನ್ನು ಅಭಿವೃದ್ಧಿಗೊಳಿಸಿ ಪಾರ್ಕ್‌, ಬೋಟಿಂಗ್‌ ಹಾಗೂ ವಿಹಾರ ತಾಣವನ್ನಾಗಿ ಮಾಡಿದರೆ ಪ್ರವಾಸಿಗರನ್ನು ಸೆಳೆಯಬಹುದಾಗಿದೆ ಎಂದು ಜನರು ಬಹಳ ದಿನಗಳಿಂದಲೂ ಒತ್ತಾಯಿಸುತ್ತಿದ್ದಾರೆ. ‘ಹಿರೋಡೆ ಕೆರೆಯ ಸಂಪೂರ್ಣ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಕೆರೆಯನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

‘ಹಿರೋಡೆ ಕೆರೆಗೆ ಹೋಗುತ್ತಿರುವ ಪಟ್ಟಣದ ಗಲೀಜು ನೀರನ್ನು ತಡೆಯಬೇಕಿದೆ. ಕೆರೆಯನ್ನು ಅಭಿವೃದ್ಧಿಗೊಳಿಸಿ ಮತ್ತು ನೀರನ್ನು ಶುಚಿಗೊಳಿಸಿ ಪಟ್ಟಣ ಸೇರಿದಂತೆ ಅಕ್ಕಪಕ್ಕ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಬಹುದಾಗಿದೆ’ ಎಂದು ಮಾಜಿ ನೀರು ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಚನ್ನಕೇಶವ ಹೇಳಿದರು.

‘ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಪಟ್ಟಣದ ಜನತೆ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಕ್ರಮವಹಿಸಬೇಕಿದೆ. ಕೂಡಲೇ ಸರ್ಕಾರ ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ಉಮಾಶಂಕರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.