ADVERTISEMENT

ಮಾನವೀಯ ಮೌಲ್ಯಗಳೇ ಧರ್ಮದ ತಿರುಳು: ನಿರ್ಮಲಾನಂದನಾಥ ಸ್ವಾಮೀಜಿ

ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 6:17 IST
Last Updated 4 ಫೆಬ್ರುವರಿ 2026, 6:17 IST
ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲಕೆರೆ ಗ್ರಾಮದ ವಿಶ್ವಮೈತ್ರಿ ಬೌದ್ಧ ಧಮ್ಮ ಧ್ಯಾನ ಕೇಂದ್ರದಲ್ಲಿ ಬುದ್ಧ ಭಾರತ ಫೌಂಡೇಶನ್‌ ಮಂಗಳವಾರ ಏರ್ಪಡಿಸಿದ್ದ ‘ಸರ್ವಧರ್ಮ ಮಾನವ ಸಮ್ಮೇಳನ’ದಲ್ಲಿ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಪಾಲ್ಗೊಂಡಿದ್ದರು. ಫೌಂಡೇಶನ್‌ ಅಧ್ಯಕ್ಷ ಜೆ. ರಾಮಯ್ಯ ಇದ್ದಾರೆ
ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲಕೆರೆ ಗ್ರಾಮದ ವಿಶ್ವಮೈತ್ರಿ ಬೌದ್ಧ ಧಮ್ಮ ಧ್ಯಾನ ಕೇಂದ್ರದಲ್ಲಿ ಬುದ್ಧ ಭಾರತ ಫೌಂಡೇಶನ್‌ ಮಂಗಳವಾರ ಏರ್ಪಡಿಸಿದ್ದ ‘ಸರ್ವಧರ್ಮ ಮಾನವ ಸಮ್ಮೇಳನ’ದಲ್ಲಿ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಪಾಲ್ಗೊಂಡಿದ್ದರು. ಫೌಂಡೇಶನ್‌ ಅಧ್ಯಕ್ಷ ಜೆ. ರಾಮಯ್ಯ ಇದ್ದಾರೆ   

ಶ್ರೀರಂಗಪಟ್ಟಣ: ‘ಜಗತ್ತಿನ ಯಾವುದೇ ಧರ್ಮಗಳಿಗೆ ಮಾನವೀಯ ಮೌಲ್ಯಗಳೇ ಮುಖ್ಯ ತಿರುಳು’ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನೇರಲಕೆರೆ ಗ್ರಾಮದ ವಿಶ್ವಮೈತ್ರಿ ಬೌದ್ಧ ಧಮ್ಮ ಧ್ಯಾನ ಕೇಂದ್ರದಲ್ಲಿ ಬುದ್ಧ ಭಾರತ ಫೌಂಡೇಶನ್‌ ಮಂಗಳವಾರ ಏರ್ಪಡಿಸಿದ್ದ ‘ಸರ್ವಧರ್ಮ ಮಾನವ ಸಮ್ಮೇಳನ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮನುಷ್ಯ ಎಲ್ಲ ಧರ್ಮಗಳ ಸಾರವನ್ನೂ ತಿಳಿಯಬೇಕು. ಗೌತಮ ಬುದ್ಧ ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಧರ್ಮದ ನಿಜಾರ್ಥವನ್ನು ತಿಳಿಸಿದ್ದಾರೆ. ರಾಜನಾಗಿ ಮೆರೆಯುವ ಅವಕಾಶವನ್ನು ತೊರೆದು ಸತ್ಯ ಸಾಕ್ಷಾತ್ಕಾರಕ್ಕಾಗಿ ಹೊರಟು, ನಿರಂತರ ಧ್ಯಾನದ ಮೂಲಕ ದಿವ್ಯ ಜ್ಞಾನ ಪಡೆದು ಸರಳತೆ ಮತ್ತು ಸತ್ಯದ ಮಾರ್ಗಗಳನ್ನು ನಮಗೆ ಬೋಧಿಸಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ಮುನ್ನಡೆದರೆ ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಬುದ್ಧನ ಪಂಚಶೀಲ ತತ್ವಗಳು ಮತ್ತು ತ್ರಿಪೀಠಿಕಾಗಳನ್ನು ಯುವ ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ’ ಎಂದು ತಿಳಿಸಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಕೊಳ್ಳೇಗಾಲ ಚೇತವನದ ಮನೋರಖ್ಖಿತ ಬಂತೆ ‘ಬುದ್ದನ ಪಂಚಶೀಲ ತತ್ವಗಳಲ್ಲಿ ಜೀವನದ ಸಮಗ್ರ ಸಾರವೇ ಅಡಗಿದೆ. ಸುಳ್ಳು ಹೇಳದೆ, ದುಶ್ಚಟಗಳಿಗೆ ಬಲಿಯಾಗದೆ ಬದುಕುವುದನ್ನು ಅವು ತಿಳಿಸುತ್ತವೆ. ಮೌಢ್ಯಾಚರಣೆ ಬಿಡಲು ಪ್ರೇರೇಪಿಸುತ್ತವೆ. ಶಾಲೆ, ಕಾಲೇಜುಗಳಲ್ಲಿ ಪಂಚಶೀಲ ತತ್ವಗಳನ್ನು ಪ್ರಸಾರ ಮಾಡಬೇಕು’ ಎಂದರು.

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಗೌತಮ ಕರುಣೆಯೇ ನಿಜವಾದ ಧರ್ಮ ಮಾರ್ಗ ಎಂದು ಹೇಳಿದ್ದಾರೆ. ಬುದ್ಧನ ಅಷ್ಟಾಂಗ ಮಾರ್ಗಗಳನ್ನು ಪಾಲಿಸಿದರೆ ಸಮೃದ್ಧಿಯ ನಾಡು ಕಟ್ಟಬಹುದು. ಸಮಾಜದಲ್ಲಿ ಮಾನವ ಪ್ರಜ್ಞೆಯನ್ನು ಬೆಳೆಸಬೇಕು. ಜ್ಞಾನವನ್ನು ಬಿತ್ತಬೇಕು. ಆಧುನಿಕ ಜನಾಂಗಕ್ಕೆ ಬೌದ್ಧ ಧರ್ಮದ ಶ್ರೇಷ್ಠತೆಯ ಕುರಿತು ಅಂಬೇಡ್ಕರ್‌ ಹೇಳಿದ್ದಾರೆ. ಈ ದಿಸೆಯಲ್ಲಿ ವಕೀಲ ಜೆ. ರಾಮಯ್ಯ ಮತ್ತು ತಂಡ ಉತ್ತಮ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಕ್ರೈಸ್ತ ಧರ್ಮಗುರು ಆಂಡ್ರ್ಯೂ ಜಾನ್‌, ‘ನಮ್ಮದು ಬಹು ಧರ್ಮ ಮತ್ತು ಬಹು ಸಂಸ್ಕೃತಿಯ ದೇಶ. ಎಲ್ಲರೂ ಕೂಡಿ ಬಾಳುವುದೇ ನಿಜವಾದ ಸೌಂದರ್ಯ’ ಎಂದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬುದ್ಧ ಭಾರತ ಫೌಂಡೇಶನ್‌ ಅಧ್ಯಕ್ಷ ಜೆ. ರಾಮಯ್ಯ ಪ್ರಾಸ್ತಾವಿಕ ಮಾತುಗಳಾಡಿದರು.

ಸಿಖ್‌ ಧರ್ಮಗುರು ಬಚ್ಚನ್‌ ಸಿಂಗ್‌, ಮುಖಂಡರಾದ ಮೊಹಮದ್ ಕುನ್ನಿ, ಎಂ.ಜೆ. ಜೈನ್‌, ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಸಿದ್ದರಾಜು, ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್‌. ಸತ್ಯಾನಂದ, ಸೋಮನಹಳ್ಳಿ ಅನ್ನದಾನಿ, ಗಂಗರಾಜು, ತಾ.ಪಂ. ಮಾಜಿ ಸದಸ್ಯ ಎನ್‌.ಪಿ.ಸುರೇಶ್, ಆಶಾಜ್ಯೋತಿ ಬಿ., ಪ್ರಶಾಂತ್, ಸತೀಶ್ ಇದ್ದರು. ಸರ್ವಧರ್ಮ ಪ್ರಾರ್ಥನೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.