ಮಂಡ್ಯ: ನಾಗಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ 2022–2023 ಮತ್ತು 2023–24ರ ಅವಧಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಸುಮಾರು ₹83 ಲಕ್ಷ ಹಣ ದುರುಪಯೋಗ ಪಡಿಸಿಕೊಂಡಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ (ಎ.ಬಿ.ಎ.ಆರ್.ಕೆ), ಆರೋಗ್ಯ ರಕ್ಷಾ ಸಮಿತಿ (ಎ.ಆರ್.ಎಸ್), ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ), ರಾಜ್ಯ ವಲಯ ಹಾಗೂ ಬಳಕೆದಾರರ ನಿಧಿಯಿಂದ ಖರೀದಿ ಮಾಡಿರುವ ಔಷಧಿಗಳು, ವೈದ್ಯಕೀಯ ಸಲಕರಣೆ ಹಾಗೂ ಪರಿಕರಗಳಿಗೆ ಸಂಬಂಧಿಸಿದ ಬಿಲ್ಲುಗಳಲ್ಲಿ ಆದಾಯ ತೆರಿಗೆ (ಐ.ಟಿ) ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಕಟಾವಣೆ ಮಾಡದೇ ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟು ಮಾಡಲಾಗಿದೆ ಎಂಬುದನ್ನು ತನಿಖಾ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
‘ಖರೀದಿ ಹಗರಣ’ ನಡೆದಿದೆ ಎಂದು ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ.ಮೋಹನ್ ಅವರಿಗೆ ದೂರು ಸಲ್ಲಿಸಿದ್ದರು.
ದೂರಿನ ಮೇರೆಗೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಎಚ್., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ ಎಂ.ಸಿ. ಸೇರಿದಂತೆ ಆರು ಸದಸ್ಯರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಿ, ಡಿಎಚ್‌ಒ ಅವರು 2024ರ ಡಿಸೆಂಬರ್‌ನಲ್ಲಿ ತನಿಖೆಗೆ ಆದೇಶಿಸಿದ್ದರು.
ತನಿಖಾ ತಂಡ ನಾಗಮಂಗಲ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿ, ನೌಕರರನ್ನು ವಿಚಾರಣೆ ನಡೆಸಿ, ಕಡತಗಳನ್ನು ಪರಿಶೀಲಿಸಿ ಸಲ್ಲಿಸಿದ ತನಿಖಾ ವರದಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
2022–2023 ಮತ್ತು 2023–24ರ ಅವಧಿಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿದ್ದ (ಪ್ರಸ್ತುತ ಕೀಲು ಮೂಳೆ ತಜ್ಞರು) ಡಾ.ವೆಂಕಟೇಶ್ ಡಿ.ಎಸ್., ಕಚೇರಿ ಅಧೀಕ್ಷಕ ಅಂಜನಪ್ಪ, ಪ್ರಥಮ ದರ್ಜೆ ಸಹಾಯಕ ಮೋಹನ್, ಹಿರಿಯ ಫಾರ್ಮಸಿ ಅಧಿಕಾರಿ ಪುಟ್ಟರಾಜು, ಫಾರ್ಮಸಿ ಅಧಿಕಾರಿ ಉಮಾ ಅವರನ್ನು ತನಿಖಾ ತಂಡ ವಿಚಾರಣೆ ನಡೆಸಿ, ವರದಿಯನ್ನು ಸಲ್ಲಿಸಿದೆ.
ನಿಯಮಾನುಸಾರ ಟೆಂಡರ್ ನಡೆಸದೆ ಬಿಡಿ ಬಿಡಿಯಾಗಿ ಕೆಲವೇ ದಿನಗಳ ಅಂತರದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಗಳು ಹಾಗೂ ಸರ್ಜಿಕಲ್ ಉಪಕರಣಗಳನ್ನು ಖರೀದಿಸಿ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ’ (ಕೆಟಿಪಿಪಿ) ಕಾಯ್ದೆ ಉಲ್ಲಂಘಿಸಲಾಗಿದೆ. ಖರೀದಿಗೆ ಸಂಬಂದಿಸಿದಂತೆ ಕೆಳಹಂತದಿಂದ ಬೇಡಿಕೆ ಪಟ್ಟಿ ಪಡೆಯದೆ ಖರೀದಿ ನಡೆಸಿರುವುದು. ಕೋಟೇಷನ್ ತೆರೆಯುವಾಗ ಲಕೋಟೆಯ ಮೇಲೆ ಆಡಳಿತ ವೈದ್ಯಾಧಿಕಾರಿಗಳ ಒಂದೇ ಸಹಿ ಇರುವುದನ್ನು ತನಿಖಾ ಸಮಿತಿ ಗುರುತಿಸಿದೆ.
ಬ್ರ್ಯಾಂಡ್ ಹೆಸರಿನಲ್ಲಿ ಔಷಧಗಳ ಖರೀದಿ ಮಾಡುವಂತಿಲ್ಲವಾದರೂ ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಬ್ರ್ಯಾಂಡ್ ಹೆಸರಿನಲ್ಲೂ ಔಷಧ ಖರೀದಿಸಲಾಗಿದೆ. ಕೆಲವೊಂದು ಕೊಟೇಷನ್‌ಗಳಲ್ಲಿ ದಿನಾಂಕ ತಿದ್ದುಪಡಿ ಮಾಡಿರುವುದನ್ನು ತನಿಖಾ ಸಮಿತಿ ಪತ್ತೆ ಹಚ್ಚಿದೆ.
‘ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಮೊತ್ತವನ್ನು ಲೆಕ್ಕ ಹಾಕಿ, ಜಮಾ ಮಾಡಿಸಲು ಕ್ರಮ ಕೈಗೊಳ್ಳಬೇಕು. ಕೆಟಿಪಿಪಿ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿ’ ಎಂದು ತನಿಖಾ ತಂಡ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಸ್ಪಷ್ಟನೆ ಕೇಳಲಾಗಿದೆ. ಉತ್ತರ ಕೊಟ್ಟ ನಂತರ ಆರೋಗ್ಯ ಇಲಾಖೆ ಆಯುಕ್ತರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು–ಡಾ.ಕೆ.ಮೋಹನ್ ಡಿಎಚ್‌ಒ ಮಂಡ್ಯ
ಉಳಿದ ತಾಲ್ಲೂಕು ಆಸ್ಪತ್ರೆಗಳಲ್ಲೂ ಭ್ರಷ್ಟಾಚಾರ ನಡೆದಿರುವ ಸಂಶಯವಿದೆ. ಡಿಎಚ್‌ಒ ಸ್ವಯಂಪ್ರೇರಿತರಾಗಿ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು– ಎಂ.ಬಿ.ನಾಗಣ್ಣಗೌಡ ಮೈಸೂರು ವಿಭಾಗೀಯ ಅಧ್ಯಕ್ಷ ಕರುನಾಡ ಸೇವಕರು ಸಂಘಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.