ಮಂಡ್ಯ: ಸಮಾಜ ಕಲ್ಯಾಣ ಇಲಾಖೆಯ ಮಂಡ್ಯ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಮತ್ತು ಟಿ.ವಿ, ಬೆಡ್ ಕವರ್ಸ್, ವಾಟರ್ ಪ್ಯೂರಿಫೈಯರ್ ಉಪಕರಣಗಳ ಖರೀದಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಆರ್‌ಟಿಐ ಕಾರ್ಯಕರ್ತ ಎಂ.ಡಿ. ಕೇಶವಮೂರ್ತಿ ಮತ್ತು ವಾರ್ಡನ್‌ಗಳು ದೂರು ಸಲ್ಲಿಸಿದ್ದರು. ಈ ಬಗ್ಗೆ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಉಪ ಪ್ರಧಾನ ವ್ಯವಸ್ಥಾಪಕಿ ಪ್ರತಿಭಾ ಎಸ್. ಅವರು ತನಿಖೆ ನಡೆಸಿ, ಸುಮಾರು ₹10 ಲಕ್ಷಕ್ಕೂ ಹೆಚ್ಚು ಮೊತ್ತದ ಅವ್ಯವಹಾರ ನಡೆದಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ವರದಿ ನೀಡಿದ್ದಾರೆ.
2020–21ನೇ ಸಾಲಿನಿಂದ 2023–24ನೇ ಸಾಲಿನವರೆಗೆ ಮಂಡ್ಯ ತಾಲ್ಲೂಕಿಗೆ ಬಿಡುಗಡೆ ಮಾಡಿರುವ ಇಲಾಖೆ ಅನುದಾನದಲ್ಲಿ ಆರ್ಥಿಕ ಮಿತವ್ಯಯ ಪಾಲನೆ ಮಾಡದೇ ಅನಗತ್ಯ ಮತ್ತು ನಿಯಮಬಾಹಿರ ವೆಚ್ಚ ಮಾಡಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ಧಲಿಂಗೇಶ ಬೇವಿನಮಟ್ಟಿ ಮತ್ತು ಮಂಡ್ಯ ತಾಲ್ಲೂಕು ಸಹಾಯಕ ನಿರ್ದೇಶಕಿ ಕಾವ್ಯಶ್ರೀ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಬಹುದು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಹಾಸ್ಟೆಲ್ ವಾರ್ಡನ್‌ಗಳಿಂದ ಬೇಡಿಕೆ ಇಲ್ಲದಿದ್ದರೂ 2021–22ನೇ ಸಾಲಿನಲ್ಲಿ 8 ವಿದ್ಯಾರ್ಥಿ ನಿಲಯಗಳಿಗೆ ಒಟ್ಟಾರೆ ₹2.76 ಲಕ್ಷ ಮೊತ್ತದಲ್ಲಿ ಬೆಡ್ ಕವರ್ಸ್‌ಗಳನ್ನು ಖರೀದಿ ಮಾಡಲಾಗಿದೆ. 6 ಹಾಸ್ಟೆಲ್‌ಗಳಿಗೆ ಎರಡು ಪ್ರತ್ಯೇಕ ಸಂಸ್ಥೆಗಳಿಂದ ಬೆಡ್ ಕವರ್ಸ್‌ಗಳನ್ನು ಒಂದೆರಡು ತಿಂಗಳ ಅಂತರದಲ್ಲಿ ಖರೀದಿಸುವ ಔಚಿತ್ಯವೇನು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಅಗತ್ಯವಿದ್ದರೆ ಕಡಿಮೆ ದರ ನಮೂದಿಸಿದ ಒಂದೇ ಸಂಸ್ಥೆಯಿಂದ ಖರೀದಿಸಬಹುದಿತ್ತು. ಸರ್ಕಾರದ ಅನುದಾನವನ್ನು ಅನಗತ್ಯವಾಗಿ ವೆಚ್ಚ ಭರಿಸಿ, ನಷ್ಟ ಉಂಟಾಗಲು ಕಾರಣರಾಗಿದ್ದಾರೆ’ ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ದಾಖಲಾತಿ ಸಂಖ್ಯೆ ಕಡಿಮೆ ಇರುವುದು ಕಂಡು ಬಂದಿರುತ್ತದೆ. ನಿಲಯ ನಿರ್ವಹಣೆ ನೆಪದಲ್ಲಿ ಬೋರ್‌ವೆಲ್ ರಿಪೇರಿ, ಕಿಟಕಿ ಪರದೆ ಪೈಪ್ ಖರೀದಿ, ಬಾತ್ ರೂಮ್ ಕ್ಲೀನಿಂಗ್, ಗ್ಯಾಸ್ ಸ್ಟೌ ರಿಪೇರಿ, ಗ್ರೈಂಡರ್ ಮೋಟಾರ್ ರಿಪೇರಿ, ಫ್ಯಾನ್ ರೆಗ್ಯುಲೇಟರ್, ವಾಟರ್ ಟ್ಯಾಂಕ್ ಕ್ಲೀನಿಂಗ್, ಗ್ಯಾಸ್ಟ್ ಸ್ಟೌ ಬರ್ನಲ್, ಫ್ಯಾನ್ ರಿವೈಂಡಿಂಗ್, ಊಟದ ತಟ್ಟೆ, ಸೊಳ್ಳೆ ಪರದೆ, ಕಂಪ್ಯೂಟರ್ ರಿಪೇರಿ, ವಾಟರ್ ಹೀಟರ್ ಸರ್ವಿಸ್‌ಗಳನ್ನು ವಿವಿಧ ಸಂಸ್ಥೆಗಳಿಂದ ಪದೇ ಪದೇ ಖರೀದಿ ಅಥವಾ ರಿಪೇರಿಗಾಗಿ ವೆಚ್ಚ ಭರಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಪದೇ ಪದೇ ರಿಪೇರಿ ಹೆಸರಿನಲ್ಲಿ ಹಣ ವ್ಯಯ
ತನಿಖೆಯಲ್ಲಿ ಅವ್ಯವಹಾರ ಸಾಬೀತಾಗಿರುವುದರಿಂದ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಮತ್ತು ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ವಸೂಲಾತಿ ಮಾಡಬೇಕು– ಎಂ.ಡಿ.ಕೇಶವಮೂರ್ತಿ ಆರ್‌ಟಿಐ ಕಾರ್ಯಕರ್ತ ಟಿ.ಮಲ್ಲಿಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.