ಮದ್ದೂರು: ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದ ಸಮಾಜದ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಆಚರಿಸಲಾಯಿತು.
ಜಕಣಾಚಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷ ಮಳವಳ್ಳಿ ಶ್ರೀನಿವಾಸ್ ಸಿಂಹ ಚಾಲನೆ ನೀಡಿ,‘ ನಮ್ಮೆಲ್ಲರಲ್ಲಿ ಒಗ್ಗಟ್ಟಿದ್ದರೆ ಮಾತ್ರ ಸಮಾಜದ ಏಳಿಗೆ ಸಾಧ್ಯ’ ಎಂದರು.
‘ಸರ್ಕಾರವು ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು ಅಷ್ಟೇ ಅಲ್ಲದೇ, ಪ್ರತಿ ತಾಲ್ಲೂಕು ಕೇಂದ್ರದಲ್ಲಿ ವಿಶ್ವಕರ್ಮ ಜನಾಂಗದವರ ಅನುಕೂಲಕ್ಕಾಗಿ ಸಮುದಾಯ ಭವನದ ನಿರ್ಮಾಣಕ್ಕಾಗಿ ನಿವೇಶನವನ್ನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.
ಸಮಾಜದ ಜಿಲ್ಲಾಧ್ಯಕ್ಷ ತೈಲೂರು ಆನಂದಾಚಾರಿ ಮಾತನಾಡಿ, ‘ತಾಲ್ಲೂಕು ಆಡಳಿತವು ವಿಶ್ವಕರ್ಮ ಜಯಂತಿ ಸೇರಿದಂತೆ ಅಮರಶಿಲ್ಪಿ ಜಕಣಾಚಾರಿ ರವರ ಜಯಂತಿಗಳನ್ನು ಆಚರಿಸುವ ವಿಷಯದಲ್ಲಿ ಸರಿಯಾದ ಕಾಳಜಿ ವಹಿಸುತ್ತಿಲ್ಲ. ಏನೋ ಕಾಟಾಚಾರಕ್ಕೆ, ನಾಮಕಾವಸ್ಥೆಗಷ್ಟೇ ಆಚರಣೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಜಯಂತಿ ಆಚರಣೆಗೂ ಮುನ್ನ ನಡೆಯುವ ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಪಾಲಿಸುವುದಿಲ್ಲ, ಅನುದಾನ ಕಡಿಮೆಯಿದೆ ಎಂದು ಬೇಕಾಬಿಟ್ಟಿ ಆಚರಣೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಸಮುದಾಯದ ಮುಖಂಡರನ್ನು ಸರಿಯಾಗಿ ಆಹ್ವಾನಿಸುವುದಿಲ್ಲ ಹಾಗೂ ಗಣನೆಗೂ ತೆಗೆದುಕೊಳ್ಳುವುದಿಲ್ಲ ಎಂದು ಆರೋಪಿಸಿದ ಅವರು, ಈ ಬಗ್ಗೆ ಜಿಲ್ಲಾಡಳಿತವು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಪವಿತ್ರಾ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಬಸವಾಚಾರಿ, ಮುಖಂಡರಾದ ಶಿವಕುಮಾರ್, ಮಂಟೇಸ್ವಾಮಿ, ಉಮಾಶಂಕರ್, ಶಶಿಕುಮಾರ್, ಮಹದೇವು, ವೀರಭದ್ರಾಚಾರ್, ತೊರೆಚಾಕನಹಳ್ಳಿ ಆನಂದ್, ನಾಗೇಶ್, ಗಣೇಶ್, ಜಗದೀಶ್, ಕುಮಾರಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.