ADVERTISEMENT

ಕನಕ ಪಾರ್ಕ್‌ ನಿರ್ಮಾಣಕ್ಕೆ ಸಿದ್ಧತೆ: ಶಾಸಕ ಪಿ.ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:18 IST
Last Updated 9 ನವೆಂಬರ್ 2025, 4:18 IST
ಮಂಡ್ಯ ಜಿಲ್ಲಾಡಳಿತದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ನಡೆದ ‘ಕನಕ ಜಯಂತಿ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಪಿ.ರವಿಕುಮಾರ್‌, ಜಿಲ್ಲಾಧಿಕಾರಿ ಕುಮಾರ, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು 
ಮಂಡ್ಯ ಜಿಲ್ಲಾಡಳಿತದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ನಡೆದ ‘ಕನಕ ಜಯಂತಿ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಪಿ.ರವಿಕುಮಾರ್‌, ಜಿಲ್ಲಾಧಿಕಾರಿ ಕುಮಾರ, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು    

ಮಂಡ್ಯ: ‘ಜಿಲ್ಲೆಯಲ್ಲಿ ಕನಕದಾಸರ ತತ್ವಗಳನ್ನು ಜೀವಂತವಾಗಿಡಲು ₹1 ಕೋಟಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಬಸರಾಳಿನಲ್ಲಿ ಅರ್ಧಕ್ಕೆ ನಿಂತು ಹೋಗಿದ್ದ ಕನಕ ಭವನ ನಿರ್ಮಾಣಕ್ಕೆ ₹30 ಲಕ್ಷ ಬಿಡುಗಡೆ ಮಾಡಲಾಗಿದೆ. ಉಮ್ಮಡಹಳ್ಳಿ ಭೀರೇಶ್ವರ ಸಮುದಾಯ ಭವನಕ್ಕೆ ₹20 ಲಕ್ಷ ಬಿಡುಗಡೆ ಮಾಡಲಾಗಿದೆ’ ಎಂದು ಶಾಸಕ ಪಿ.ರವಿಕುಮಾರ್‌ ಹೇಳಿದರು. 

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಡೊಂಕುಗಳನ್ನು ತಿದ್ದಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ADVERTISEMENT

‘ಒಬ್ಬ ಸಾಮಾನ್ಯ ವ್ಯಕ್ತಿಯು ಸಹ ದೇವರನ್ನು ಒಲಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟವರು ಕನಕದಾಸರು. ಕನಕದಾಸರ ಭಕ್ತಿಗೆ ಶ್ರೀಕೃಷ್ಣ ಮೆಚ್ಚಿ ದಾಸರಿಗೆ ದರ್ಶನ ಕೊಟ್ಟಿದ್ದನ್ನು ಇಂದಿಗೂ ಸಹ ಉಡುಪಿಯಲ್ಲಿ ನಾವು ಕಾಣಬಹುದು’ ಎಂದು ಹೇಳಿದರು.

‘ಸರ್ಕಾರ 2023ರಲ್ಲಿ ಗ್ಯಾರಂಟಿಗಳನ್ನು ಘೋಷಿಸಿದಾಗ ಇಡೀ ದೇಶದಲ್ಲಿ ಇದು ಸಾಧ್ಯವಿಲ್ಲವೆಂದು ವ್ಯಾಪಕ ಚರ್ಚೆ ಉಂಟಾಗಿತ್ತು‌. ಒಂದು ಲಕ್ಷ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಮುಡಿಪಾಗಿಸಿ ರಾಜ್ಯದ ಜನರ ಏಳಿಗೆಗಾಗಿ ಸರ್ಕಾರ ಶ್ರಮಿಸುತ್ತಿದೆ. ನೀವು ಆಯ್ಕೆ ಮಾಡಿರುವ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಿಮಗೆ ನೀಡುತ್ತದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಕನಕದಾಸರು ತಮ್ಮ ಕೀರ್ತನೆಗಳನ್ನು ಸಾರಿದ ಜಾಗಗಳೆಲ್ಲ ಇಂದು ಪುಣ್ಯ ಸ್ಥಳವಾಗಿವೆ. ಸಮಾಜದಲ್ಲಿನ ಅಸಮಾನತೆ, ತಾರತಮ್ಯವನ್ನು ನಿರ್ಮೂಲನೆ ಮಾಡಿ ಸಮಸಮಾಜವನ್ನು ನಿರ್ಮಾಣ ಕಟ್ಟಬೇಕು ಎಂಬುದು ಅವರ ಆಶಯವಾಗಿತ್ತು. ಹಾಗಾಗಿ ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ನೀವೇನಾದರು ಬಲ್ಲಿರಾ’ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದರು ಎಂದು ತಿಳಿಸಿದರು.

ಸಾಹಿತಿ ಚಿಕ್ಕಣ್ಣ ಡಿ.ಪಿ. ಮಾತನಾಡಿ, ಕನಕದಾಸರು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ತಮ್ಮ ತತ್ವಗಳನ್ನು ಸಾರುವ ಮೂಲಕ ಸಮಾಜದ ಡೊಂಕು ತಿದ್ದಿದವರು. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.

ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಡಿ. ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಸಂದೇಶ್ ಪಾಲ್ಗೊಂಡಿದ್ದರು. 

ಅದ್ದೂರಿ ಮೆರವಣಿಗೆ

ಕನಕದಾಸ ಜಯಂತಿಯ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದವರೆಗೂ ಕನಕದಾಸರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.  ವರ್ಣರಂಜಿತ ರಥದ ಮೇಲೆ ಇರಿಸಲಾಗಿದ್ದ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆಯನ್ನು ಜಿಲ್ಲಾಧಿಕಾರಿ ಕುಮಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ನೆರವೇರಿಸಿದರು. ಜಿಲ್ಲಾಧಿಕಾರಿ ಕುಮಾರ ನಗಾರಿ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ಕುಣಿತ ಪೂಜಾ ಕುಣಿತ ಮತ್ತು ಇತರೆ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.