ADVERTISEMENT

ಶ್ರೀರಂಗಪಟ್ಟಣ: ಕನ್ನಡ ಎನೆ ಕುಣಿದಾಡುವುದು ‘ಕೊನಾಪು’ ಲೇಖನಿ

ಗಣಂಗೂರು ನಂಜೇಗೌಡ
Published 1 ನವೆಂಬರ್ 2021, 5:27 IST
Last Updated 1 ನವೆಂಬರ್ 2021, 5:27 IST
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಕವಿ ಕೊ.ನಾ.ಪುರುಷೋತ್ತಮ (ಕೊನಾಪು) ಅವರ ‘ಪುರುಷ ಪಥ’ ಕವನ ಸಂಕಲವನ್ನು ಗಾಂಧಿವಾದಿ ಡಾ.ಬಿ.ಸುಜಯಕುಮಾರ್ ಆ.16ರಂದು ಬಿಡುಗಡೆ ಮಾಡಿದ ಸಂದರ್ಭ
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಕವಿ ಕೊ.ನಾ.ಪುರುಷೋತ್ತಮ (ಕೊನಾಪು) ಅವರ ‘ಪುರುಷ ಪಥ’ ಕವನ ಸಂಕಲವನ್ನು ಗಾಂಧಿವಾದಿ ಡಾ.ಬಿ.ಸುಜಯಕುಮಾರ್ ಆ.16ರಂದು ಬಿಡುಗಡೆ ಮಾಡಿದ ಸಂದರ್ಭ   

ಶ್ರೀರಂಗಪಟ್ಟಣ: ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಸಾಹಿತ್ಯವೇ ಹಿರಿದು ಎಂದು ನಂಬಿರುವ ಕವಿ ಕೊ.ನಾ. ಪುರುಷೋತ್ತಮ (ಕೊನಾಪು) ಕನ್ನಡ ಭಾಷೆಯಲ್ಲಿ ವಿವಿಧ ವಸ್ತು, ವಿಷಯವುಳ್ಳ ಇಪ್ಪತ್ತು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.

ತಾಲ್ಲೂಕಿನ ಅರಕೆರೆ ಗ್ರಾಮದ ವಾಸಿ ಕೊ.ನಾ.ಪುರುಷೋತ್ತಮ (ಕೊಡಗಹಳ್ಳಿ ನಾಗಾರಾಜರಾವ್‌ ಪುರುಷೋತ್ತಮ) ಅವರ ಪ್ರಥಮ ಕೃತಿ ‘ಕಾವ್ಯ ಲಹರಿ’ ಹನಿಗವನ ಸಂಕಲನ 1992ರಲ್ಲಿ ಪ್ರಕಾಶಗೊಂಡಿತು. ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಿ.ಎಸ್‌.ಶಿವರುದ್ರಪ್ಪ ಈ ಕೃತಿಯನ್ನು ಬಿಡುಗಡೆ ಮಾಡಿದರು.

1994ರಲ್ಲಿ ಮೈಸೂರಿನ ಅನಾಥಾಲ ಯದಲ್ಲಿ ತಮ್ಮ ಮತ್ತೊಂದು ಕೃತಿ ಬೆಸುಗೆ–2 ಕೃತಿಯ ಬಿಡುಗೆ ಸಮಾರಂಭದಲ್ಲಿ ಪುರುಷೋತ್ತಮ ಪೂರ್ಣಿಮಾ ಅವರನ್ನು ವರಿಸಿ ದರು. ಅವರ ಪ್ರಾಯ ಪಿಸುಗುಟ್ಟಿದಾಗ ಕೃತಿಯನ್ನು ಶಿಕ್ಷಣ ತಜ್ಞ ಹಾರೋಹಳ್ಳಿ ನಂಜೇಗೌಡ 1995ರಲ್ಲಿ ಪಾಂಡ ವಪುರದಲ್ಲಿ ಬಿಡುಗಡೆ ಮಾಡಿದರು. ಪ್ರೇಮ ಲಹರಿ, ಪ್ರೀತಿ ಸೋನೆ, ಕಾವ್ಯಾರಾಧನೆ, ಇರುವುದೆಲ್ಲವ ಬಿಟ್ಟು, ಹೃದಯ ಕಾದಿರಿಸು ನನಗಾಗಿ, ಕಾವ್ಯ ಕನ್ನಿಕೆಯ ತೆಕ್ಕೆಯಲ್ಲಿ, ಪುರುಷ ಪಥ, ಲೊಳಲೊಟ್ಟೆ ಸೇರಿದಂತೆ ಇದುವರೆಗೆ 20 ಕೃತಿಗಳನ್ನು ರಚಿಸಿರುವ ಕೊನಾಪು ಇದೀಗ ತಮ್ಮ 21ನೇ ಕೃತಿ ಹನಿಗವನ ರಚನೆಯ ಸಿದ್ಧತೆಯಲ್ಲಿದ್ದಾರೆ.

ADVERTISEMENT

ರಾಜ್ಯದ ವಿವಿಧೆಡೆ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 1992ರಿಂದ ನಿರಂತರವಾಗಿ ಭಾಗವಹಿಸುತ್ತಿರುವ ಕೊನಾಪು ಸಮ್ಮೇಳನದಲ್ಲಿ ತಮ್ಮ ಪುಸ್ತಕಗಳ ಪ್ರದರ್ಶನ ಏರ್ಪಡಿಸುತ್ತಾರೆ. ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ. ಬೆಂಗಳೂರು, ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ ಸೇರಿದಂತೆ 75ಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆ ವಾಚಿಸಿದ್ದಾರೆ.

ಮನೆಯಲ್ಲಿ ರಾಜ್ಯೋತ್ಸವ: ಪ್ರತಿ ವರ್ಷ ನವೆಂಬರ್‌ ಮಾಸದಲ್ಲಿ ತಮ್ಮ ಮನೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕೊನಾಪು ಕವಿಗೋಷ್ಠಿ, ಕನ್ನಡ ಕೃತಿಗಳ ಸಂವಾದ, ಕನ್ನಡ ಸಾಹಿತ್ಯ ಓದು ಇತರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ತಾವು ಪಾಠ ಮಾಡುವ ಶಾಲೆಗಳಲ್ಲಿ ಕೂಡ ರಾಜ್ಯೋತ್ಸವ ಆಚರಿಸುವುದು ನಿರಂತರವಾಗಿ ನಡೆದಿದೆ.

ಪ್ರಶಸ್ತಿಗಳು: ಪುರುಷೋತ್ತಮ ಅವರು ತಮ್ಮ ಕನ್ನಡಾಭಿಮಾನ ಮತ್ತು ಅವರ ಕನ್ನಡ ಸಾಹಿತ್ಯ ಸೇವೆಗೆ 2015ರಲ್ಲಿ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ತಾಲ್ಲೂಕು ಆಡಳಿತದಿಂದಲೂ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಧಾರವಾಡದ ಕನ್ನಡ ಸಂಘ ಇವರಿಗೆ ಆರೂಢ ಬೆಳಗು ಪ್ರಶಸ್ತಿ ನೀಡಿ ಗೌರವಿಸಿದೆ. ಮೈಸೂರಿನ ಹೊಯ್ಸಳ ಕನ್ನಡ ಸಂಘದಿಂದ ‘ದಸರಾ ಕಾವ್ಯ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ. ಚುಟುಕು ಸಾಹಿತ್ಯ ರತ್ನ ಪ್ರಶಸ್ತಿ, ತಾಲ್ಲೂಕು ಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

1994ರಿಂದ ಸರ್ಕಾರಿ ಶಾಲೆ ಶಿಕ್ಷಕರಾಗಿರುವ ಕೊನಾಪು ಸದ್ಯ ತಾಲ್ಲೂಕಿನ ಸಬ್ಬನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೊ.ಜಿ.ವೆಂಕಟಸುಬ್ಬಯ್ಯ, ಸಿಪಿಕೆ, ಡಾ.ರಾಗೌ, ಜರಗನಹಳ್ಳಿ ಶಿವಶಂಕರ್‌, ನಾ.ದಾಮೋದರಶೆಟ್ಟಿ ಅವರಂಥ ಮೇರು ಸಾಹಿತಿಗಳು ಕೊನಾಪು ಅವರ ಕೃತಿಗಳಿಗೆ ಮುನ್ನುಡಿ ಬರೆದುಕೊಟ್ಟು ಬೆನ್ನು ತಟ್ಟಿದ್ದಾರೆ. ಕನ್ನಡ ನಾಡ ನುಡಿಯ ಬಗೆಗಿನ ತಮ್ಮ ಮಿತಿಯಿಲ್ಲದ ಪ್ರೀತಿಯ ಕಾರಣಕ್ಕೆ ಕನ್ನಡ ಮೇಷ್ಟ್ರು ಕೊನಾಪು ಎಂದೇ ಜನ ಮಾನಸದಲ್ಲಿ ಹೆಸರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.