ADVERTISEMENT

ಹಂಪಾಪುರದ ಹೊಲದ ಮಧ್ಯೆ ಅನಾಥವಾಗಿ ಬಿದ್ದಿರುವ ಗಾಣದ ಕಲ್ಲಿನಲ್ಲಿ ಕನ್ನಡ ಲಿಪಿ

ಗಣಂಗೂರು ನಂಜೇಗೌಡ
Published 10 ಜನವರಿ 2026, 5:16 IST
Last Updated 10 ಜನವರಿ 2026, 5:16 IST
ಶ್ರೀರಂಗಪಟ್ಟಣ ತಾಲ್ಲೂಕಿನ ಹಂಪಾಪುರ ಹೊರ ವಲಯದ ಜಮೀನಿನಲ್ಲಿರುವ ಗಾಣದ ಕಲ್ಲಿನ ಮೇಲೆ ಕೆತ್ತಿರುವ ಕನ್ನಡ ಶಾಸನ ಪತ್ತೆ ಮಾಡಿದ ಸಂಶೋಧನಾ ವಿದ್ಯಾರ್ಥಿ ಚಲುವರಾಜು
ಶ್ರೀರಂಗಪಟ್ಟಣ ತಾಲ್ಲೂಕಿನ ಹಂಪಾಪುರ ಹೊರ ವಲಯದ ಜಮೀನಿನಲ್ಲಿರುವ ಗಾಣದ ಕಲ್ಲಿನ ಮೇಲೆ ಕೆತ್ತಿರುವ ಕನ್ನಡ ಶಾಸನ ಪತ್ತೆ ಮಾಡಿದ ಸಂಶೋಧನಾ ವಿದ್ಯಾರ್ಥಿ ಚಲುವರಾಜು   

ಶ್ರೀರಂಗಪಟ್ಟಣ: ತಾಲ್ಲೂಕಿನ ಹಂಪಾಪುರ ಹೊರ ವಲಯದ ಕೃಷಿ ಜಮೀನಿನ ನಡುವೆ ಪಾಳು ಬಿದ್ದಿರುವ ಶಿವಾಲಯದ ಬಳಿ ಎರಡು ಶಿಲಾ ಶಾಸನಗಳು ಪತ್ತೆಯಾಗಿವೆ.

ಹೊಲದ ಮಧ್ಯೆ ಅನಾಥವಾಗಿ ಬಿದ್ದಿರುವ ಗಾಣದ ಕಲ್ಲಿನ ಎರಡು ಬದಿಯಲ್ಲಿ ಕನ್ನಡ ಲಿಪಿಯ ಶಾಸನಗಳನ್ನು ಸಂಶೋಧನಾ ವಿದ್ಯಾರ್ಥಿ ಇದೇ ತಾಲ್ಲೂಕಿನ ಮಹದೇವಪುರ ಗ್ರಾಮದ ಚಲುವರಾಜು ಪತ್ತೆ ಹಚ್ಚಿದ್ದಾರೆ. ಎಣ್ಣೆ ಗಾಣದ ಕಲ್ಲಿನ ಎರಡು ಬದಿಯಲ್ಲಿ ಅಕ್ಷರಗಳು ಕಂಡು ಬಂದಿದ್ದು, ಒಂದು ಬದಿಯಲ್ಲಿ 8 ಸಾಲು ಹಾಗೂ ಮತ್ತೊಂದು ಬದಿಯಲ್ಲಿ 6 ಸಾಲಿನಲ್ಲಿ ಬರಹವಿದೆ. ‘ನಾಗಬನ’ ಮತ್ತು ‘ಮಾಳಯನೆಂಬುವ’ ಎಂಬ ಅಕ್ಷರಗಳು ಮಾತ್ರ ಗೋಚರಿಸುತ್ತಿದ್ದು, ಉಳಿದ ಅಕ್ಷರಗಳು ಮಸುಕಾಗಿವೆ.

ಗಾಣದ ಕಲ್ಲಿನ ಶಾಸನ ಇರುವ ಸ್ಥಳದಿಂದ 20 ಅಡಿಗಳ ದೂರದಲ್ಲಿರುವ ಶಿಥಿಲಾವಸ್ಥೆಯ ಪುರಾತನ ದೇವಾಲಯದ ಒಳಗೆ ಬಿದ್ದಿರುವ ಯತಿಯೊಬ್ಬರ ಶಿಲಾ ಮೂರ್ತಿ ಇದ್ದು, ಅದರ ಪೀಠದಲ್ಲಿ ನಾಲ್ಕು ಸಾಲುಗಳ ಕನ್ನಡ ಲಿಪಿಯ ಬರಹವಿದೆ. ಕರ್ಣಕುಂಡಲ ಮತ್ತು ರುದ್ರಾಕ್ಷಿ ಮಾಲೆ ಧರಿಸಿ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಯತಿಯ ಶಿಲ್ಪದಲ್ಲಿರುವ ಅಕ್ಷಗಳು ಕೂಡ ಕನ್ನಡ ಲಿಪಿಯಲ್ಲಿವೆ.

ADVERTISEMENT

ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗದ ಪೀಠವಿದೆ. ಆದರೆ ಅದರಲ್ಲಿರುವ ಶಿವಲಿಂಗ ನಾಪತ್ತೆಯಾಗಿದೆ. ಈ ಪೀಠದ ಪಕ್ಕದಲ್ಲಿ ನಾಗರ ಶಿಲ್ಪ ಹಾಗೂ ಎದುರಿನಲ್ಲಿ ಅಲಂಕೃತ ನಂದಿಯ ಶಿಲ್ಪ ಪೂರ್ವಾಭಿಮುಖವಾಗಿದೆ. ನಂದಿ ಮತ್ತು ಯತಿಯ ಶಿಲ್ಪಗಳು ಭಗ್ನವಾಗಿವೆ.

‘ಹಂಪಾಪುರ ಸಮೀಪದ ಹೊಲದಲ್ಲಿ ಪಾಳು ಬಿದ್ದಿರುವ, ಭಾಗಶಃ ಮಣ್ಣಿನಲ್ಲಿ ಹೂತು ಹೋಗಿರುವ ದೇವಾಲಯಕ್ಕೆ ಭೇಟಿ ನೀಡಿದ್ದಾಗ ಶಾಸನಗಳು ಪತ್ತೆಯಾಗಿವೆ. ಸದ್ಯ ಈ ಶಾಸನಗಳನ್ನು ಇದುವರೆಗೆ ಎಲ್ಲಿಯೂ ದಾಖಲು ಮಾಡಿಲ್ಲ. ಇವುಗಳನ್ನು ಶುಚಿಗೊಳಿಸಿ ಕಾರ್ಬನ್‌ ಡೇಟಿಂಗ್‌ ಮೂಲಕ ಇವುಗಳನ್ನು ಓದಿ ಅರ್ಥೈಸಿದರೆ ಇವು ಯಾವ ಕಾಲಕ್ಕೆ ಸೇರಿವೆ ಎಂಬುದು ಬೆಳಕಿಗೆ ಬರಲಿದೆ’ ಎಂದು ‘ಜೋಗಿ ಪರಂಪರೆ’ ಕುರಿತು ಸಂಶೋಧನೆ ನಡೆಸುತ್ತಿರುವ ಚಲುವರಾಜು ಹೇಳುತ್ತಾರೆ.

‘ಹಂಪಾಪುರ ಬಳಿ ಪತ್ತೆಯಾಗಿರುವ ಶಿಲಾ ಶಾಸನಗಳನ್ನು ಇತಿಹಾಸಕಾರರು ಓದಿ ದಾಖಲು ಮಾಡಿರುವ ಮಾಹಿತಿ ಎಪಿಗ್ರಾಫಿಯಾ ಕರ್ನಾಟಿಕ ಅಥವಾ ಇತರ ಯಾವುದೇ ಕೃತಿಗಳಲ್ಲಿ ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಇದು ‘ದಾನ ಶಾಸನ’ದಂತೆ ಇದೆ. ದೇವಾಲಯ ಅಥವಾ ಉತ್ಸವಗಳಿಗೆ ಎಣ್ಣೆಯನ್ನು ದಾನವಾಗಿ ಕೊಡುವ ಪರಂಪರೆಯವರು ಇದನ್ನು ಬರೆಯಿಸಿರುವ ಸಾಧ್ಯತೆ ಇದೆ’ ಎಂದು ಲೇಖಕಿ ಹಾಗೂ ಕೆಆರ್‌ಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಶಿಲ್ಪಶ್ರೀ ಹರವು ತಿಳಿಸಿದ್ದಾರೆ.

‘ಒರಟು ಕಲ್ಲಿನಲ್ಲಿ ಕೆತ್ತಿರುವ ಈ ಶಾಸನಗಳ ಕನ್ನಡ ಲಿಪಿ ಮತ್ತು ಯತಿಯ ಶಿಲ್ಪ ಹೊಯ್ಸಳೋತ್ತರ ಕಾಲದ ಲಕ್ಷಣಗಳನ್ನು ಹೊಂದಿವೆ. ಅಲಂಕೃತ ನಂದಿಯ ಶಿಲ್ಪ ಹೊಯ್ಸಳರ ಕಾಲಕ್ಕೆ ಸೇರಿರುವಂತೆ ಕಾಣುತ್ತಿದೆ’ ಎಂದು ಮೈಸೂರಿನ ಶಾಸನ ತಜ್ಞ ಹಾಗೂ ಮೈಸೂರು ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲನಿಯದ ರಿಜಿಸ್ಟ್ರಾರ್‌ ಪ್ರೊ.ಮಂಜುನಾಥ್ ಹೇಳುತ್ತಾರೆ.

ಗಾಣದ ಕಲ್ಲಿನ ಮತ್ತೊಂದು ಬದಿಯಲ್ಲಿರುವ ಬರಹ
ಯತಿಯೊಬ್ಬರ ಶಿಲ್ಪದ ಕೆಳಗಿರುವ ಅಕ್ಷರಗಳ ಸಾಲು
ಹಂಪಾಪುರ ಬಳಿ ಇರುವ ಪುರಾತನ ಶಿವಾಲಯ
ಹಂಪಾಪುರ ಬಳಿ ಶಾಸನಗಳು ಪತ್ತೆಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ಅವುಗಳ ಅಧ್ಯಯನ ಮತ್ತು ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗುವುದು
ಎನ್‌.ಎನ್‌. ಗೌಡ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯೂರೇಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.