ADVERTISEMENT

ದುಬೈ ಕನ್ನಡ ಶಾಲೆಗೆ 310 ಮಕ್ಕಳು ದಾಖಲು!

20 ಮಕ್ಕಳಿಂದ ಆರಂಭ, ವಾರಾಂತ್ಯದಲ್ಲಿ ತರಗತಿ, ಹೊರನಾಡು ಕನ್ನಡಿಗರ ದೊಡ್ಡ ಶಾಲೆ

ಎಂ.ಎನ್.ಯೋಗೇಶ್‌
Published 31 ಅಕ್ಟೋಬರ್ 2020, 19:30 IST
Last Updated 31 ಅಕ್ಟೋಬರ್ 2020, 19:30 IST
ದುಬೈನಲ್ಲಿ ‘ಕನ್ನಡ ಮಿತ್ರರು’ ಸಂಘಟನೆಯಿಂದ ನಡೆಯುತ್ತಿರುವ ಕನ್ನಡ ಶಾಲೆ (ಸಂಗ್ರಹ ಚಿತ್ರ)
ದುಬೈನಲ್ಲಿ ‘ಕನ್ನಡ ಮಿತ್ರರು’ ಸಂಘಟನೆಯಿಂದ ನಡೆಯುತ್ತಿರುವ ಕನ್ನಡ ಶಾಲೆ (ಸಂಗ್ರಹ ಚಿತ್ರ)   

ಮಂಡ್ಯ: ದುಬೈನಲ್ಲಿ ‘ಕನ್ನಡ ಮಿತ್ರರು’ ಸಂಘಟನೆ ನಡೆಸುತ್ತಿರುವ ಉಚಿತ ಕನ್ನಡ ಶಾಲೆಗೆ ಈ ವರ್ಷ 310 ಮಕ್ಕಳು ದಾಖಲಾಗಿದ್ದಾರೆ. ಆ ಮೂಲಕ ಈ ಶಾಲೆ ಹೊರನಾಡಿನ ಕನ್ನಡಿಗರು ನಡೆಸುವ ವಿಶ್ವದ ಅತೀದೊಡ್ಡ ಕನ್ನಡ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ.

ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳು ಅಲ್ಲಿಯ ಶಾಲೆಗಳಲ್ಲಿ ಇಂಗ್ಲಿಷ್‌, ಅರಬ್ಬಿ‌, ಪರ್ಷಿಯಾ ಮುಂತಾದ ಭಾಷೆ ಕಲಿಯಬೇಕು. ಮಾತೃಭಾಷೆಯ ಅಭಿಮಾನ ಹೊಂದಿರುವ ಕನ್ನಡಿಗರೆಲ್ಲರೂ ಸೇರಿ ‘ಕನ್ನಡ ಮಿತ್ರರು’ ಸಂಘಟನೆ ಕಟ್ಟಿಕೊಂಡಿದ್ದು ಕಳೆದ 6 ವರ್ಷಗಳಿಂದ ಉಚಿತ ಕನ್ನಡ ಶಾಲೆ ನಡೆಸುತ್ತಿದ್ದಾರೆ.

ವಾರಾಂತ್ಯದಲ್ಲಿ (ದುಬೈನಲ್ಲಿ ಶುಕ್ರವಾರ ರಜೆ) ನಡೆಯುವ ಈ ಶಾಲೆಯಲ್ಲಿ ಮಕ್ಕಳು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಹಂತದಲ್ಲಿ ಕನ್ನಡ ಕಲಿಯುತ್ತಾರೆ. 6 ತಿಂಗಳ ಕನ್ನಡ ಕೋರ್ಸ್‌ ಇದಾಗಿದ್ದು ಕಡೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕದ ಕನ್ನಡ ಸಾಧಕರನ್ನು ದುಬೈಗೆ ಆಹ್ವಾನಿಸಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಶಿಕ್ಷಕರಿಗೆ ತರಬೇತಿ ಕೊಡಿಸಲಾಗಿದ್ದು ಅವರು ಯಾವುದೇ ವೇತನ ಪಡೆಯದೇ ಪಾಠ ಬೋಧನೆ ಮಾಡುತ್ತಾರೆ.

ADVERTISEMENT

‘ದುಬೈನಲ್ಲಿ ಹೆಚ್ಚು ಕೇರಳಿಗರು ನೆಲೆಸಿದ್ದು ಜನಸಂಖ್ಯೆಯ ಆಧಾರದ ಮೇಲೆ ದುಬೈನ ಶಾಲೆಗಳಲ್ಲಿ ಮಲೆಯಾಳಂ ಭಾಷೆಯನ್ನು ಕಲಿಸುವ ಅವಕಾಶವಿದೆ. ಆದರೆ ಕನ್ನಡಿಗರು ಕಡಿಮೆ ಸಂಖ್ಯೆಯಲ್ಲಿದ್ದು ನಮ್ಮ ಮಕ್ಕಳಿಗೆ ಕನ್ನಡ ಕಲಿಯುವ ಅವಕಾಶವಿಲ್ಲ. ಹೀಗಾಗಿ ಈ ಶಾಲೆ ಕನ್ನಡ ಕಲಿಯುವ ನಮ್ಮ ಮಕ್ಕಳ ದಾಹ ನೀಗಿಸಿದೆ. ಕನ್ನಡ ಬಲ್ಲ ಕಾಸರಗೂಡಿನ ವಲಸಿಗರೂ ತಮ್ಮ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ’ ಎಂದು ಎಂದು ಕನ್ನಡ ಮಿತ್ರರು ಸಂಘಟನೆ ಸಂಚಾಲಕ, ಮಳವಳ್ಳಿ ಮೂಲದ ಎ.ಎನ್‌.ಭಾನುಕುಮಾರ್‌ ಹೇಳಿದರು.

2014ರಲ್ಲಿ ಶಾಲೆ ಆರಂಭಗೊಂಡಾಗ 20 ಮಕ್ಕಳು ಸೇರ್ಪಡೆಯಾಗಿದ್ದರು. ನಾಲ್ಕು ವರ್ಷಗಳ ಕಾಲ ಸುತ್ತೂರು ಶ್ರೀಗಳ ಸಹಾಯದಿಂದ ದುಬೈನಲ್ಲಿರುವ ಜೆಎಸ್‌ಎಸ್‌ ಶಾಲಾ ಕಟ್ಟಡದಲ್ಲಿ ತರಗತಿ ನಡೆಸಲಾಯಿತು. ಈಗ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರ ಸಹಾಯದೊಂದಿಗೆ ಬೇರೊಂದು ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. 2019ರಲ್ಲಿ ಮಕ್ಕಳ ಸಂಖ್ಯೆ 220ಕ್ಕೆ ಏರಿಕೆಯಾಗಿತ್ತು. ಕೋವಿಡ್‌ ಅವಧಿಯಲ್ಲೂ ಈಗ ಮಕ್ಕಳ ದಾಖಲಾತಿ ಸಂಖ್ಯೆ 303ಕ್ಕೆ ಏರಿಕೆಯಾಗಿದೆ.

‘ದುಬೈನಲ್ಲೇ ಹುಟ್ಟಿ, ಬೆಳೆಯುವ ನಮ್ಮ ಮಕ್ಕಳಿಗೆ ಕನ್ನಡ ಬರುತ್ತಿರಲಿಲ್ಲ. ಮಾತೃಭಾಷೆಯಿಂದ ನಮ್ಮ ಮಕ್ಕಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಉಚಿತ ಶಾಲೆ ಸ್ಥಾಪನೆ ಮಾಡಲಾಗಿದೆ. ಸಣ್ಣದಾಗಿ ಆರಂಭವಾದ ಶಾಲೆ ಈಗ ಹೊರನಾಡಿನ ಕನ್ನಡಿಗರು ನಡೆಸುತ್ತಿರುವ ಅತೀದೊಡ್ಡ ಶಾಲೆಯಾಗಿ ಬೆಳೆದಿದೆ’ ಎಂದು ಕನ್ನಡಮಿತ್ರರು ಸಂಘಟನೆ ಅಧ್ಯಕ್ಷ ಶಶಿಧರ್‌ ನಾಗರಾಜಪ್ಪ ಹೇಳಿದರು.

ವಲಸಿಗರು ತಮ್ಮ ಜನ್ಮಭೂಮಿಯ ಶಾಲೆಗಳಿಗೂ ಸಹಾಯ ಮಾಡಿದ್ದಾರೆ. ಮೈಸೂರು, ಬಳ್ಳಾರಿ, ಕಲಬುರ್ಗಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಪ್ರಿಂಟರ್‌, ಪ್ರಾಜೆಕ್ಟರ್‌ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ನ.6ರಿಂದ ತರಗತಿ ಆರಂಭ

‘ಹೊಸ ಬ್ಯಾಚ್‌ನ ತರಗತಿಗಳು ನ.6ರಿಂದ ಆರಂಭಗೊಳ್ಳುತ್ತಿವೆ. ಕೋವಿಡ್‌ ಕಾರಣದಿಂದ ಆನ್‌ಲೈನ್‌ನಲ್ಲಿ ತರಗತಿ ನಡೆಯಲಿವೆ. ತರಗತಿಯನ್ನು ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಕಾರ್ಯದರ್ಶಿ ಡಾ.ಮುರಳೀಧರ್, ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಆನ್‌ಲೈನ್‌ ಮೂಲಕ ಉದ್ಘಾಟಿಸಲಿದ್ದಾರೆ’ ಎಂದು ಸಂಘಟನೆಯ ಸದಸ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.