ADVERTISEMENT

ತಮನ್ನಾ ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಆಕ್ಷೇಪ: ಹಸುವಿನ ಮೈ ತೊಳೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:36 IST
Last Updated 29 ಮೇ 2025, 14:36 IST
ಮೈಸೂರು ಸ್ಯಾಂಡಲ್ ಸಾಬೂನಿನ ಪ್ರಚಾರ ರಾಯಭಾರಿಯನ್ನಾಗಿ ತಮನ್ನಾ ಬಾಟಿಯಾ ನೇಮಕ ಮಾಡಿರುವ ಕ್ರಮವನ್ನು ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಶ್ರೀರಂಗಪಟ್ಟಣ ತಾಲ್ಲೂಕಿನ ಬೊಮ್ಮೂರು ಅಗ್ರಹಾರದಲ್ಲಿ ಗುರುವಾರ ಹಸುವಿಗೆ ಸ್ನಾನ ಮಾಡಿಸುವ ಮೂಲಕ ಪ್ರತಿಭಟನೆ ನಡೆಸಿದರು
ಮೈಸೂರು ಸ್ಯಾಂಡಲ್ ಸಾಬೂನಿನ ಪ್ರಚಾರ ರಾಯಭಾರಿಯನ್ನಾಗಿ ತಮನ್ನಾ ಬಾಟಿಯಾ ನೇಮಕ ಮಾಡಿರುವ ಕ್ರಮವನ್ನು ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಶ್ರೀರಂಗಪಟ್ಟಣ ತಾಲ್ಲೂಕಿನ ಬೊಮ್ಮೂರು ಅಗ್ರಹಾರದಲ್ಲಿ ಗುರುವಾರ ಹಸುವಿಗೆ ಸ್ನಾನ ಮಾಡಿಸುವ ಮೂಲಕ ಪ್ರತಿಭಟನೆ ನಡೆಸಿದರು   

ಶ್ರೀರಂಗಪಟ್ಟಣ: ಮೈಸೂರು ಸ್ಯಾಂಡಲ್ ಸಾಬೂನಿನ ಪ್ರಚಾರ ರಾಯಭಾರಿಯನ್ನಾಗಿ ಚಿತ್ರನಟಿ ತಮನ್ನಾ ಬಾಟಿಯಾ ಅವರನ್ನು ನೇಮಕ ಮಾಡಿಕೊಂಡಿರುವ ಕೆಎಸ್‌ಡಿಎಲ್‌ ಕ್ರಮವನ್ನು ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ತಾಲ್ಲೂಕಿನ ಬೊಮ್ಮೂರು ಅಗ್ರಹಾರದಲ್ಲಿ ಗುರುವಾರ ಹಸುಗಳಿಗೆ ಮೈಸೂರು ಸ್ಯಾಂಡಲ್‌ ಸೋಪ್‌ನಿಂದ ಸ್ನಾನ ಮಾಡಿಸಿ ಪ್ರತಿಭಟನೆ ನಡೆಸಿದರು.

ಕೆಎಸ್‌ಡಿಎಲ್‌ ವಿರುದ್ಧ ಘೋಷಣೆ ಕೂಗಿದರು. ತಮನ್ನಾ ಬಾಟಿಯಾ ಅವರ ನೇಮಕ ಸಂಬಂಧ ಆಗಿರುವ ಒಪ್ಪಂದವನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಈ ಸಾಬೂನು ಬಳಸುವುದನ್ನು ನಿಲ್ಲಿಸುತ್ತೇವೆ ಎಂದು ಎಚ್ಚರಿಸಿದರು.

ತಮನ್ನಾ ಅವರ ನೇಮಕವನ್ನು ಸಮರ್ಥಿಸಿಕೊಂಡಿರುವ ಸಚಿವ ಎಂ.ಬಿ. ಪಾಟೀಲ ಅವರ ವಿರುದ್ಧ ವೇದಿಕೆಯ ಅಧ್ಯಕ್ಷ ಬಿ. ಶಂಕರಬಾಬು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮೈಸೂರು ಸ್ಯಾಂಡಲ್‌ ಸಾಬೂನು ಕರ್ನಾಟಕ ಸರ್ಕಾರದ ಪ್ರಸಿದ್ಧ ಉತ್ಪನ್ನ. ಹಲವು ದಶಕಗಳಿಂದ ಇದಕ್ಕೆ ಉತ್ತಮ ಬೇಡಿಕೆ ಇದೆ. ತಮನ್ನಾ ಅವರಿಗೆ ₹6.20 ಕೋಟಿ ಕೊಟ್ಟು ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ತನಿಖೆಯಾಗಬೇಕು. ಅಗತ್ಯವಿದ್ದರೆ ಕನ್ನಡದ ಸಿನಿಮಾ ತಾರೆಯರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಚ್‌. ಜಗದೀಶ್, ಮಹಿಳಾ ಘಟಕದ ಅಧ್ಯಕ್ಷೆ ಛಾಯಾದೇವಿ, ಪದಾಧಿಕಾರಿಗಳಾದ ಅಂಕಶೆಟ್ಟಿ, ಜಯಮ್ಮ, ರೇವಮ್ಮ, ಸುಮಿತ್ರಮ್ಮ, ಮನೋಜ್‌, ಧನುಷ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.