ADVERTISEMENT

ಮಂಡ್ಯ: ಬಿಜೆಪಿ ಬ್ಯಾನರ್‌ಗಳಲ್ಲಿ ಸಂಸದೆ ಸುಮಲತಾ ಚಿತ್ರ, ಚರ್ಚೆಗೆ ಗ್ರಾಸ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 13:00 IST
Last Updated 29 ಡಿಸೆಂಬರ್ 2022, 13:00 IST
ಅಮಿತ್‌ ಶಾ ಅವರಿಗೆ ಸ್ವಾಗತಿಸುವ ಫ್ಲೆಕ್ಸ್‌ಗಳಲ್ಲಿ ಸಂಸದೆ ಸುಮಲತಾ ಅವರ ಭಾವಚಿತ್ರ ಇರುವುದು
ಅಮಿತ್‌ ಶಾ ಅವರಿಗೆ ಸ್ವಾಗತಿಸುವ ಫ್ಲೆಕ್ಸ್‌ಗಳಲ್ಲಿ ಸಂಸದೆ ಸುಮಲತಾ ಅವರ ಭಾವಚಿತ್ರ ಇರುವುದು   

ಮಂಡ್ಯ: ಕೇಂದ್ರ ಗೃಹಸಚಿವ ಅಮಿತ್‌ ಶಾ ಡಿ.30ರಂದು ನಗರಕ್ಕೆ ಭೇಟಿ ನೀಡುತ್ತಿದ್ದು ಎಲ್ಲೆಡೆ ಕೇಸರಿ ಬಾವುಟ, ಫ್ಲೆಕ್ಸ್‌, ಬ್ಯಾನರ್‌ ರಾರಾಜಿಸುತ್ತಿವೆ. ಫ್ಲೆಕ್ಸ್‌ಗಳಲ್ಲಿ ಪಕ್ಷೇತರ ಸಂಸದೆ ಸುಮಲತಾ ಭಾವಚಿತ್ರ ಇರುವುದು ಚರ್ಚೆಗೆ ಗ್ರಾಸವಾಗಿದ್ದು ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಎಂಬ ‌ಪ್ರಶ್ನೆ ಸೃಷ್ಟಿಯಾಗಿದೆ.

ಜಿಲ್ಲಾ ಹಾಲು ಒಕ್ಕೂಟದ (ಮನ್‌ಮುಲ್‌) ಆವರಣದಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿಗೆ ಅಮಿತ್‌ ಶಾ ಶುಕ್ರವಾರ ಚಾಲನೆ ನೀಡಲಿದ್ದಾರೆ. ನಂತರ ನಗರದಲ್ಲಿ ನಡೆಯಲಿರುವ ಬಿಜೆಪಿ ಜನಸಂಪರ್ಕ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಫ್ಲೆಕ್ಸ್‌ ಅಳವಡಿಸಲಾಗಿದೆ.

ಶ್ರೀರಂಗಪಟ್ಟಣ ಬಿಜೆಪಿ ಮುಖಂಡ ಸಚ್ಚಿದಾನಂದ ಅಳವಡಿಸಿರುವ ಬಹುತೇಕ ಫ್ಲೆಕ್ಸ್‌ಗಳಲ್ಲಿ ಸುಮಲತಾ ಭಾವಚಿತ್ರಗಳಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಸಚ್ಚಿದಾನಂದ ಸುಮಲತಾ ಪರ ಕೆಲಸ ಮಾಡಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಕೆಪಿಸಿಸಿ ಅವರನ್ನು ಉಚ್ಛಾಟನೆ ಮಾಡಿತ್ತು. ನಂತರ ಅವರು ಬಿಜೆಪಿ ಸೇರ್ಪಡೆಯಾಗಿದ್ದರು.

ADVERTISEMENT

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಚ್ಚಿದಾನಂದ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಬೆಂಬಲ ನೀಡಲಾಗುವುದು’ ಎಂದು ಸುಮಲತಾ ಘೋಷಿಸಿದ್ದರು. ಈ ಕಾರಣಕ್ಕೆ ಅಮಿತ್‌ ಶಾ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳಲ್ಲಿ ಸುಮಲತಾ ಭಾವಚಿತ್ರ ಹಾಕಿಸಿದ್ದಾರೆ. ಬಿಜೆಪಿ ಕಾರ್ಯಕ್ರಮದಲ್ಲಿ ಪಕ್ಷೇತರ ಸಂಸದೆಯ ಭಾವಚಿತ್ರ ಇರುವ ಸಂಬಂಧ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.

‘ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಹಾಕದೇ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು, ಪ್ರಧಾನಿ ಕೂಡ ಸುಮಲತಾ ಅವರ ಪರ ಮತ ಕೇಳಿದ್ದರು. ಸುಮಲತಾ ಅವರ ಮೇಲಿನ ಅಭಿಮಾನಕ್ಕಾಗಿ ಫ್ಲೆಕ್ಸ್‌ಗಳಲ್ಲಿ ಅವರ ಭಾವಚಿತ್ರ ಹಾಕಿಸಿದ್ದೇನೆ’ ಎಂದು ಸಚ್ಚಿದಾನಂದ ಹೇಳಿದರು. ಸಂಸದೆ ಸುಮಲತಾ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.