ಛಲವಾದಿ ನಾರಾಯಣಸ್ವಾಮಿ
ಮಂಡ್ಯ: ‘ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದ ಜಯಕುಮಾರ್ ಸಾವಿನ ಪ್ರಕರಣವು ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ. ದಲಿತ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆಯಾಗಬೇಕು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜಯಕುಮಾರ್ ಪತ್ನಿ ಲಕ್ಷ್ಮಿ ಅವರು ದೂರು ಕೊಡಲು ಹೋದಾಗ, ದೂರಿನ ಅರ್ಜಿಯನ್ನು ಪೊಲೀಸರು ಹರಿದು ಬಿಸಾಕಿ, ಆತ್ಮಹತ್ಯೆ ಎಂದು ಅವರೇ ದೂರು ಬರೆದುಕೊಂಡಿದ್ದಾರೆ. ಆತ್ಮಹತ್ಯೆಯಾಗಿದ್ದರೆ ಆರೋಪಿ ಅನಿಲ್‌ಕುಮಾರ್ ಅವರನ್ನು ಬಂಧಿಸಿದ್ದು ಏಕೆ? ಹುಲ್ಲಿನ ಮೆದೆಗೆ ಬಿದ್ದು ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಇದು ಪೂರ್ವನಿಯೋಜಿತ ಕೊಲೆ’ ಎಂದು ಪ್ರತಿಪಾದಿಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಲಿತರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲರಾಗಿರುವ ಹಾಗೂ ಪ್ರಕರಣವನ್ನು ತಿರುಚಲು ಯತ್ನಿಸಿರುವ ನಾಲ್ವರು ಪೊಲೀಸರನ್ನು ಅಮಾನತು ಮಾಡಿದರೆ ಸಾಲದು, ಕೆಲಸದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.
ಈ ಸರ್ಕಾರದಲ್ಲಿ ದಲಿತರಿಗೆ ರಕ್ಷಣೆಯಿಲ್ಲ. ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ. ಮೃತ ಜಯಕುಮಾರ್ ಸಾವಿಗೆ ನ್ಯಾಯ ಸಿಗಬೇಕು. ಸಾಯಿಸಿದವರಿಗೆ ಶಿಕ್ಷೆಯಾಗಬೇಕು. ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ಮತ್ತು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕಲಬುರ್ಗಿ ಜಿಲ್ಲಾಧಿಕಾರಿಯನ್ನು ನಿಂದಿಸಿರುವ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರ ವಿರುದ್ಧ ದುರುದ್ದೇಶದಿಂದ ‘ಜಾತಿ ನಿಂದನೆ’ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ರವಿಕುಮಾರ್ ಇಬ್ಬರೂ ಪರಿಶಿಷ್ಟ ಜಾತಿಗೆ ಸೇರಿದವರಲ್ಲ. ಆದರೂ, ರವಿಕುಮಾರ್ ನ್ಯಾಯಾಲಯದಿಂದ ತಡೆಯಾಜ್ಞೆ ತರಬೇಕಾಯಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.