
ಕೆ.ಆರ್.ಪೇಟೆ: ತಾಲ್ಲೂಕಿನಾದ್ಯಂತ ಮೈಕೊರೆಯುವ ತಣ್ಣನೆಯ ಗಾಳಿ ಬೀಸುತ್ತಿದ್ದು ಚಳಿಯ ಆರ್ಭಟಕ್ಕೆ ಜನ ಹೈರಾಣಾಗಿದ್ದಾರೆ.
ಕಳೆದೊಂದು ವಾರದಿಂದ ಚಳಿಯ ತೀವ್ರತೆ ಹೆಚ್ಚಾಗಿದ್ದು ಮುಂಜಾನೆ 8 ಗಂಟೆಯಾದರೂ ದಿನನಿತ್ಯದ ವ್ಯವಹಾರಗಳಿಗೆ ಪೇಟೆಯ ಬೀದಿಯಲ್ಲಿ ಜನರ ಓಡಾಟ ವಿರಳವಾಗಿದ್ದು, ಮುಂಜಾನೆಯ ವಾಯುವಿಹಾರ ನಡೆಸುವವರ ಸಂಖ್ಯೆ ಕುಸಿದಿದೆ. ಚಳಿಯ ತೀವ್ರತೆ ಕಡಿಮೆ ಮಾಡಿಕೊಳ್ಳಲು ಜನರು ಅಲ್ಲಲ್ಲಿ ಬೆಂಕಿ ಹಾಕಿ, ಸುತ್ತಲೂ ಮೈಯೊಡ್ಡಿ ಕೂರುವ ದೃಶ್ಯ ಸಾಮಾನ್ಯವಾಗಿದೆ.
ಪಟ್ಟಣದಲ್ಲಿ ಪ್ರತಿನಿತ್ಯ ಬೆಳಗಿನ ನಡಿಗೆಗಾಗಿ ಕಾಲೇಜು ಮೈದಾನ, ಕ್ರೀಡಾಂಗಣದಲ್ಲಿ ಜಮಾಯಿಸುತಿದ್ದವರ ಸಂಖ್ಯೆಯೂ ಕಡಿಮೆಯಾಗಿದ್ದು, ಸಂಜೆಯ ನಡಿಗೆಗೂ ಜನ ಮನೆ ಬಿಟ್ಟು ಬೀದಿಗಿಳಿಯುತ್ತಿಲ್ಲ.
‘ಧನುರ್ಮಾಸದಲ್ಲಿ ಬೇಗನೆ ಎದ್ದು ಸ್ನಾನ ಮಾಡಿ ದೇವಾಲಯಗಳಿಗೆ ಭೇಟಿ ನೀಡಿದರೆ ಶುಭವಾಗುತ್ತದೆಂಬ ನಂಬಿಕೆ ಇದೆ. ಆದರೆ ಈ ಬಾರಿಯ ಮೈನಡುಗಿಸುವ ಚಳಿಯಿಂದಾಗಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸುವವರ ಸಂಖ್ಯೆ ಕಳೆದ ಬಾರಿಯಂತೆ ಕಾಣುತ್ತಿಲ್ಲ. ಅಲ್ಲದೆ ಮುಂಜಾನೆಯಲ್ಲಿ ಎದ್ದು ಹೋಟೆಲ್‌ಗಳಿಗೆ ಹೋಗಿ ಟೀ- ಕಾಫಿ ಕುಡಿಯಲು ಬರುತ್ತಿರುವವರ ಸಂಖ್ಯೆಯೂ ಕಳೆದೊಂದು ವಾರದಿಂದ ಕಡಿಮೆಯಾಗಿದೆ’ ಎಂದು ಟೀ ಕ್ಯಾಂಟಿನ್ ಮಾಲೀಕ ಪರಮೇಶ್ ಹೇಳಿದರು.
‘ಇಷ್ಟು ವರ್ಷ ಚಳಿ ಇತ್ತಾದರೂ ತಣ್ಣನೆಯ ಗಾಳಿ ಇರಲಿಲ್ಲ. ಆದರೆ ಮೈ ನಡುಗಿಸುವ ಚಳಿಯಿಂದಾಗಿ ಬೇಗನೆ ಎದ್ದೇಳುವುದು, ಮಕ್ಕಳನ್ನು ಎಬ್ಬಿಸುವುದು ಕಷ್ಟವಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸುವುದರಲ್ಲಿ ಸಾಕಾಗಿ ಹೋಗುತ್ತಿದೆ’ ಎಂದು ಗೃಹಿಣಿ ಶಶಿಕಲಾ ಹೇಳಿದರು.
ಉಷ್ಣಾಂಶದಲ್ಲಿ ಗಮನಾರ್ಹ ಇಳಿಕೆಯಾಗಿರುವುದರಿಂದ ಶೀತಗಾಳಿ ಹೆಚ್ಚಾಗಿದ್ದು ಮನೆಯಲ್ಲಿ ಪೆಟಾರಿ ಸೇರಿದ್ದ ಸ್ವೆಟರ್, ಟೋಪಿ ಹೊರಬಂದು ಮೈ ಮತ್ತು ತಲೆಯನ್ನು ಅಲಂಕರಿಸುತ್ತಿವೆ. ಉಣ್ಣೆಯ ಟವಲ್ ಮತ್ತು ಕಂಬಳಿಗಳು ಬೇಡಿಕೆ ಪಡೆದಿವೆ. ಗ್ರಾಮೀಣ ಪ್ರದೇಶದಲ್ಲಿಯೂ ಇದೇ ಸ್ಥಿತಿ ಇದ್ದು ಗ್ರಾಮೀಣ ಭಾಗದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು ಮೈ ಕೊರೆಯುವ ಚಳಿಯಿಂದಾಗಿ ಹೈನುಗಾರಿಕೆ ಮತ್ತು ಪಶುಪಾಲನೆ ಮೇಲೂ ಪ್ರಭಾವ ಬೀರಿದೆ.
ಆರೋಗ್ಯಕ್ಕೆ ಹೆಚ್ಚು ಗಮನಹರಿಸಿ
ಶೀತಗಾಳಿ ಹೆಚ್ಚಾಗಿರುವುದರಿಂದ ಜನರು ದೇಹದ ಆರೋಗ್ಯಕ್ಕೆ ಹೆಚ್ಚು ಗಮನಹರಿಸಬೇಕು ಬಿಸಿನೀರು ಮತ್ತು ಆಹಾರ ವನ್ನು ಸೇವಿಸಬೇಕು. ಮಕ್ಕಳು ಬೆಚ್ಚನೆಯ ಉಡುಪು ಧರಿಸಬೇಕು. ಜನರು ಅನಾವಶ್ಯಕವಾಗಿ ಓಡಾಡುವುದನ್ನು ಕಡಿಮೆ ಮಾಡಿ ಆರೋಗ್ಯದ ಕಡೆ ಗಮನ ನೀಡಬೇಕೆಂದು ವೈದ್ಯ ಡಾ.ಅರವಿಂದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.