ಕೆ.ಆರ್.ಪೇಟೆ: ತಾಲ್ಲೂಕಿನ ಚಾಕನಾಯಕನಹಳ್ಳಿಯ ಬಳಿ ಈಚೆಗೆ ನಡೆದ ಡರ್ಟ್ ಟ್ರ್ಯಾಕ್ ರೇಸ್ ಮೋಟಾರ್ ಬೈಕುಗಳ ಓಟದ ಸ್ಪರ್ಧೆಯ ಸಮಯದಲ್ಲಿ ಗುಂಪು ಘರ್ಷಣೆ ನಡೆದು ರಾಮನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್‌ಸ್ಟೆಬಲ್ ಸೈಯದ್ ಮನ್ಸೂರು ಎಂಬುವವರು ಗಾಯಗೊಂಡಿರುವ ಘಟನೆ ನಡೆದಿದೆ.
ಸೈಯದ್ ಅವರು ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಯವರ ಗನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರಜೆ ಮೇಲೆ ಊರಿಗೆ ಬಂದಿದ್ದರು. ಬೈಕ್ ರೇಸ್ ನಡೆಯುವ ಸ್ಥಳಕ್ಕೆ ಹೋದ ಸಂದರ್ಭ ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿದೆ.
‘ಜು.27ರಂದು ಚಾಕನಹಳ್ಳಿ ಬಳಿ ಬೈಕ್ ರೇಸ್ ನಡೆಯುವ ಸಂದರ್ಭದಲ್ಲಿ ಆರೋಪಿಗಳಾದ ನಾಗಮಂಗಲ ನಿವಾಸಿಗಳಾದ ಮುತ್ತಾಬೀರ್, ಅಜ್ಜು, ಬಾಲಿ ಸೇರಿದಂತೆ ಆರು ಮಂದಿ ಗುಂಪು ಕಟ್ಟಿಕೊಂಡು ಬಂದು ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಕಲ್ಲು, ಮರದ ತುಂಡುಗಳಿಂದ ತೀವ್ರ ಹಲ್ಲೆ ನಡೆಸಿದ್ದು ಅವರ ಮೇಲೆ ಕ್ರಮ ಜರುಗಿಸಿ’ ಎಂದು ಸೈಯದ್ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.