
ಮಳವಳ್ಳಿ: ತಾಲ್ಲೂಕಿನ ಬೊಪ್ಪೇಗೌಡನಪುರ(ಬಿಜಿಪುರ) ಹೋಬಳಿಯ ಬೆಳಕವಾಡಿಯ ದೊಡ್ಡಕೆರೆ ಹೂಳೆತ್ತುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗ ಬೆಳಕವಾಡಿ, ಜವನಗಹಳ್ಳಿ, ಹೊಸಹಳ್ಳಿ ಗ್ರಾಮಸ್ಥರೊಂದಿಗೆ ಜಮಾಯಿಸಿದ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೆರೆಯ ಹೂಳು ತೆಗೆಯಬೇಕು. ಕಸ ಕಡ್ಡಿ ಸೇರಿದಂತೆ ಕೊಳಚೆ ನೀರು ಹರಿಯದಂತೆ ತಡೆಯಬೇಕು ಎಂದು ಆಗ್ರಹಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ಬೆಳಕವಾಡಿಯ ಸ.ನಂ. 4ರಲ್ಲಿ 40 ಎಕರೆಗೂ ಹೆಚ್ಚು ವಿಸ್ತೀರ್ಣದ ಸರ್ಕಾರಿ ವ್ಯಾಪ್ತಿಯ 500ಕ್ಕೂ ಹೆಚ್ಚು ಎಕರೆಯಲ್ಲಿ ರೈತರು ಭತ್ತ, ರಾಗಿ, ಜೋಳ, ನೆಲಗಡಲೆ ಇತರೆ ಆಹಾರ ಧಾನ್ಯಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಕೆರೆಗೆ ತನ್ನದೇ ಆದ ಇತಿಹಾಸ ಇದೆ. ಇಂಥ ಕೆರೆ ಇತ್ತೀಚಿನ ವರ್ಷಗಳಲ್ಲಿ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಯುಜಿಡಿ ನೀರು, ಚರಂಡಿ ನೀರು, ಕಸ ಕಡ್ಡಿ ಮತ್ತು ಸತ್ತ ಪ್ರಾಣಿಗಳು, ಕೋಳಿ ತ್ಯಾಜ್ಯಗಳನ್ನು ಹಾಕಲಾಗುತ್ತಿದೆ. ಮಾಧವ ಮಂತ್ರಿ ನಾಲೆಯ ಮೂಲಕ ತಲಕಾಡು, ಕುಕ್ಕೂರು, ಮೇದಿನಿ, ಮಡವಾಡಿ ಗ್ರಾಮಗಳ ಚರಂಡಿ ನೀರು ಸೇರಿ ಕೆರೆ ಕಲುಷಿತವಾಗುತ್ತಿದೆ. ವ್ಯವಸಾಯದ ವೇಳೆ ರೈತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂಥ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಒತ್ತುವರಿಯನ್ನು ತೆರವುಗೊಳಿಸಿ, ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಶಿರಸ್ತೇದಾರ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಎನ್.ಮಹದೇವಯ್ಯ, ಕೆ.ಎನ್.ಮೂರ್ತಿ, ಮಹದೇವಸ್ವಾಮಿ, ರಘು, ಸೋಮಶೇಖರ ಮೂರ್ತಿ, ಚೇತನ್, ವಿಷಕಂಠ, ನಂಜಂಡಸ್ವಾಮಿ, ಪದ್ಮ, ಪರಿಮಳ, ಚಿಕ್ಕಮಾರಯ್ಯ, ಯಶವಂತ, ಚಿಕ್ಕರಾಚಯ್ಯ, ಸಂಧ್ಯಾ, ನಾಗೇಂದ್ರಸ್ವಾಮಿ ಭಾಗವಹಿಸಿದ್ದರು.
40 ಎಕರೆಗೂ ಹೆಚ್ಚು ವಿಸ್ತೀರ್ಣದ ಕೆರೆ ಕೆರೆಯ ಹೂಳು ಎತ್ತಲು ಮನವಿ ಕೊಳಚೆ ನೀರು ಕೆರೆಗೆ ಹರಿಯದಂತೆ ತಡೆಯಲು ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.