ಪಾಂಡವಪುರ: ಜಮೀನಿನ ವಿಚಾರವಾಗಿ ಚರ್ಚಿಸಲು ಬಂದ ವಕೀಲ ಅಮಿತ್ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರ ವರ್ತನೆ ಖಂಡಿಸಿ ವಕೀಲರು ತಾಲ್ಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಮುಂಭಾಗ ಜಮಾವಣೆಗೊಂಡ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಮತ್ತು ನಾಗಮಂಗಲ ತಾಲ್ಲೂಕಿನ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಅವರ ನಡೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಕನಗನಮರಡಿ ನಾಗರಾಜು ಮಾತನಾಡಿ, ‘ಕೆ.ಆರ್.ಶ್ರೀನಿವಾಸ್ ಅವರ ಕರ್ತವ್ಯ ನಿಷ್ಠೆ ಬಗ್ಗೆ ಅನುಮಾನವಿದ್ದು, ಇವರು ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೂ ಎಸಿ ನ್ಯಾಯಾಲಯದಲ್ಲಿ ಆಗಿರುವ ಎಲ್ಲಾ ವ್ಯಾಜ್ಯಗಳಿಗೆ ಸಂಬಂಧಿಸಿದ ಆದೇಶಗಳನ್ನು ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಆಡಳಿತ ಸೌಧಕ್ಕೆ ಬಂದಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರನ್ನು ಭೇಟಿ ಮಾಡಿದ ವಕೀಲರು, ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕಾಳೇಗೌಡ, ಕಾರ್ಯದರ್ಶಿ ನಾಗರಾಜು, ವಕೀಲರಾದ ಜಿ.ಬಿ.ಸುರೇಶ್, ಪುಟ್ಟರಾಜು, ನುಗ್ಗಹಳ್ಳಿ ಕುಮಾರ್, ನಾಗೇಶ್ ಇದ್ದರು.
ನಾಗಮಂಗಲದಲ್ಲಿ ಪ್ರತಿಭಟನೆ
ನಾಗಮಂಗಲ ವರದಿ: ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಹವಾಲು ನೀಡಲು ಹೋಗಿದ್ದ ವಕೀಲ ಆರ್.ಅಮಿತ್ ಅವರನ್ನು ಪೋಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ ಎಂದು ನಾಗಮಂಗಲ ವಕೀಲರ ಸಂಘದ ಅಧ್ಯಕ್ಷ ಮಹದೇವ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಆಡಳಿತ ಸೌಧದ ಎದುರು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ವಿರುದ್ಧ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ನಾಗಮಂಗಲ ವಕೀಲರ ಸಂಘದಿಂದ ಕಂದಾಯ ಕಾರ್ಯದರ್ಶಿಯವರಿಗೆ ಸಲ್ಲಿಸಿದ ಮನವಿಯನ್ನು ಶಿರಸ್ತೆದಾರ್ ಉಮೇಶ್ ರವರಿಗೆ ಹಸ್ತಾಂತರಿಸಲಾಯಿತು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಉಮೇಶ್ ಹಡೇನಹಳ್ಳಿ, ಕಾರ್ಯದರ್ಶಿ ಎಚ್.ಜೆ.ವಿವೇಕಾನಂದ, ವಕೀಲರಾದ ಮೊಹಮ್ಮದ್ ತಾಸಿನ್, ಟಿ.ಕೆ.ರುಕ್ಮಿಣಿ, ಎಸ್.ಎನ್.ಮಂಜುಳ, ರಾಜಮ್ಮ, ಕೆಂಪೇಗೌಡ, ಮೋಹನ್ ರಾಜ್, ಸಿದ್ಧಲಿಂಗಸ್ವಾಮಿ, ಕೆ.ಕೆ.ಧನಂಜಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.