ಶ್ರೀರಂಗಪಟ್ಟಣ: ಕಂದಾಯ ಇಲಾಖೆ ಜನ ಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸಲಹೆ ನೀಡಿದರು.
ತಾಲ್ಲೂಕಿನ ಬೆಳಗೊಳದಲ್ಲಿ ನಾಡ ಕಚೇರಿ ಕಟ್ಟಡ ಉದ್ಘಾಟನೆ ಮತ್ತು ಕಂದಾಯ ನಿರೀಕ್ಷಕ ಹಾಗೂ ಗ್ರಾಮಾಡಳಿತ ಅಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಇತರೆ ಇಲಾಖೆಗಳಿಗೆ ಕಂದಾಯ ಇಲಾಖೆ ಮಾತೃ ಸಂಸ್ಥೆಯಂತೆ ಇದೆ. ಕೃಷಿ, ಕಂದಾಯ, ಸರ್ವೆ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇಲಾಖೆಗಳು ಒಂದಕ್ಕೊಂದು ಪೂರಕವಾಗಿರಬೇಕು. ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಜನಮೆಚ್ಚುಗೆ ಗಳಿಸಲು ಸಾಧ್ಯ’ ಎಂದು ಹೇಳಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ‘ಬೆಳಗೊಳದಲ್ಲಿ ಕಂದಾಯ ನಿರೀಕ್ಷಕ ಹಾಗೂ ಗ್ರಾಮಾಡಳಿತ ಅಧಿಕಾರಿಗಳ ಕಚೇರಿ ಕಟ್ಟಡವನ್ನು ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸ್ವಂತ ಕಟ್ಟಡ ಇಲ್ಲದ ಸರ್ಕಾರಿ ಕಚೇರಿಗಳಿಗೆ ಕಟ್ಟಡಗಳನ್ನು ಕಲ್ಪಿಸಲಾಗುವುದು. ಅನುದಾನದ ಲಭ್ಯತೆ ಆಧರಿಸಿ ಆದ್ಯತೆಯ ಮೇಲೆ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕುಮಾರ, ಉಪ ವಿಭಾಗಾಧಿಕಾರಿ ಎಲ್. ಎಂ. ನಂದೀಶ್, ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ಉಪ ತಹಶೀಲ್ದಾರ್ ಸಾಕಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವಿ. ಸುರೇಶ್, ಕಂದಾಯ ನಿರೀಕ್ಷಕ ಬಸವರಾಜು, ಗ್ರಾಮಾಡಳಿತ ಅಧಿಕಾರಿಗಳಾದ ರಘು, ಮಹೇಂದ್ರ ಹರ್ಷಿತಾ, ಮುಖಂಡರಾದ ವೆಂಕಟೇಶ್, ಬಸವಯ್ಯ, ಬೆಟ್ಟಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.