ADVERTISEMENT

ಹುತಾತ್ಮ ಯೋಧರ ಅವಲಂಬಿತರಿಗೆ ಸಿಗದ ಜಮೀನು: ಎಸಿ, ತಹಶೀಲ್ದಾರ್‌ಗಳಿಗೆ ನೋಟಿಸ್‌!

ಸಿದ್ದು ಆರ್.ಜಿ.ಹಳ್ಳಿ
Published 17 ಸೆಪ್ಟೆಂಬರ್ 2025, 3:01 IST
Last Updated 17 ಸೆಪ್ಟೆಂಬರ್ 2025, 3:01 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಸ್ವಾತಂತ್ರ್ಯ ಯೋಧರು ಮತ್ತು ಅವರ ಅವಲಂಬಿತರು ಹಾಗೂ ಹುತಾತ್ಮ ಯೋಧರು ಮತ್ತು ಅವರ ಅವಲಂಬಿತರಿಗೆ ಸಂವಿಧಾನಾತ್ಮಕವಾಗಿ ನೀಡಬೇಕಾದ ಪರಿಹಾರವನ್ನು (ಜಮೀನು) ಕಲ್ಪಿಸುವಲ್ಲಿ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ತೋರಿದ ಆರೋಪದ ಮೇರೆಗೆ ಜಿಲ್ಲೆಯ ಇಬ್ಬರು ಉಪವಿಭಾಗಾಧಿಕಾರಿ ಮತ್ತು ಏಳು ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಕರ್ನಾಟಕ ಲೋಕಾಯುಕ್ತದಿಂದ ನೋಟಿಸ್‌ ನೀಡಲಾಗಿದೆ.

ಮಂಡ್ಯ, ಕೆ.ಆರ್‌.ಪೇಟೆ, ಮದ್ದೂರು, ಮಳವಳ್ಳಿ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಹಾಗೂ ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ ಮತ್ತು ಶ್ರೀನಿವಾಸ ಅವರಿಗೆ ನೋಟಿಸ್‌ ನೀಡಲಾಗಿದೆ. 

ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸಲು ಸರ್ಕಾರದ ವಿವಿಧ ಇಲಾಖೆಗಳಿಂದ ಪೂರಕ ಸ್ಪಂದನೆ ದೊರೆಯದೆ, ವಿನಾಕಾರಣ ಲೋಕಾಯುಕ್ತ ಹಾಗೂ ವಿವಿಧ ಪ್ರಾಧಿಕಾರಗಳಿಗೆ ಸಂಬಂಧಿಸಿದ ಕುಟುಂಬಸ್ಥರು ಮೊರೆ ಹೋಗುತ್ತಿದ್ದಾರೆ. ಇದು ಲೋಕಾಯುಕ್ತ ಕಾಯ್ದೆಯಡಿ ‘ದುರಾಡಳಿತ’ ವ್ಯಾಪ್ತಿಗೆ ಒಳಪಡುವುದರಿಂದ ಲೋಕಾಯುಕ್ತ ಸಂಸ್ಥೆಯಿಂದ ‘ಸ್ವಯಂಪ್ರೇರಿತ ದೂರು’ ದಾಖಲು ಮಾಡಿಕೊಳ್ಳಲಾಗಿದೆ. 

ADVERTISEMENT

ವರದಿ ಸಲ್ಲಿಸಲು ಸೆ.23ರ ಗಡುವು:

ಏಳು ತಾಲ್ಲೂಕುಗಳ ತಹಶೀಲ್ದಾರರು ಪೂರಕ ದಾಖಲೆಗಳೊಂದಿಗೆ ಪ್ರತ್ಯೇಕ ವರದಿಯನ್ನು ಸೆ.23ರಂದು ಸಲ್ಲಿಸುವಂತೆ ಆದೇಶಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಒಟ್ಟು ಎಷ್ಟು ಮಾಜಿ ಸೈನಿಕರಿದ್ದಾರೆ? ಎಷ್ಟು ಸೈನಿಕರು ಕರ್ತವ್ಯದ ಸಮಯದಲ್ಲಿ ಹುತಾತ್ಮರಾಗಿದ್ದಾರೆ? ಹುತಾತ್ಮರಾದ ಮಾಜಿ ಸೈನಿಕರ ಎಷ್ಟು ಜನ ಅವಲಂಬಿತರಿಗೆ ಸರ್ಕಾರದಿಂದ ನಿಯಮಾನುಸಾರ ಪರಿಹಾರ ಮತ್ತು ಸವಲತ್ತು ನೀಡಲಾಗಿದೆ? ಜಮೀನು ಅಥವಾ ನಿವೇಶನಗಳನ್ನು ಎಷ್ಟು ಮಂದಿಗೆ ನೀಡಲಾಗಿದೆ? ಎಂಬ ಬಗ್ಗೆ ಮಾಹಿತಿ ಸಲ್ಲಿಸಲು ಉಪಲೋಕಾಯುಕ್ತರು ಆದೇಶಿಸಿದ್ದಾರೆ. 

ಇದುವರೆಗೆ ಎಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಎಷ್ಟು ಅರ್ಜಿಗಳನ್ನು ಪರಿಗಣಿಸಲಾಗಿದೆ ಹಾಗೂ ಎಷ್ಟು ಅರ್ಜಿಗಳು ಪರಿಗಣನೆಗೆ ಬಾಕಿ ಇವೆ ಎಂಬ ಬಗ್ಗೆ ಅಂಕಿಅಂಶದೊಂದಿಗೆ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ. ತಹಶೀಲ್ದಾರ್‌ಗಳ ವರದಿಯನ್ನು ಉಪವಿಭಾಗಾಧಿಕಾರಿಗಳು ಪರಿಶೀಲಿಸಿ, ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ಈ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. 

25 ವರ್ಷಗಳಿಂದ ಸಿಗದ ಜಮೀನು!

ಕೆ.ಆರ್‌.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಾಪುರ ಗ್ರಾಮದ ಎಲ್‌.ಬಿ.ಸುಂದರೇಶ್‌ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಪುಲ್ವಾಮಾ ಜಿಲ್ಲೆಯಲ್ಲಿ 2000ನೇ ಸಾಲಿನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಿಲುಕಿ ಹುತಾತ್ಮರಾಗಿದ್ದರು. ಮಾಜಿ ಸೈನಿಕನ ಕೋಟಾದಡಿ 8 ಎಕರೆ ಜಾಗ ಮಂಜೂರಾತಿಗಾಗಿ ಇವರ ಪತ್ನಿ ಗೀತಾ ಬಿ.ಸಿ. ಅವರು ಅರ್ಜಿಯನ್ನು ಸಲ್ಲಿಸಿದ್ದರೂ 25 ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದರು. ‘ಮಂಡ್ಯ ಜಿಲ್ಲೆಯಲ್ಲಿ ನಿವೃತ್ತ ಯೋಧರಿಗೆ ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ದೊರೆಯಬೇಕಾದ ನಿವೇಶನವನ್ನು ನಿಗದಿತ ಅವಧಿಯಲ್ಲಿ ನೀಡದೆ ಸರ್ಕಾರಿ ಅಧಿಕಾರಿಗಳು ಕರ್ತವ್ಯಲೋಪ ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಸದರಿ ದೂರಿನಲ್ಲಿ ‘ಸಾರ್ವಜನಿಕ ಹಿತಾಸಕ್ತಿ’ ಇರುವುದರಿಂದ ಈ ಬಗ್ಗೆ ಕೂಲಂಕಶವಾದ ತನಿಖೆ ಅಗತ್ಯವಿದೆ’ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅಭಿಪ್ರಾಯಪಟ್ಟಿದ್ದಾರೆ. 

‘ನಿವೇಶನ ನೀಡಲು ಆದ್ಯತೆ’

 ‘ಮಂಡ್ಯ ಜಿಲ್ಲೆಯಲ್ಲಿ ಸೂಕ್ತ ಸರ್ಕಾರಿ ಜಾಗ ಲಭ್ಯತೆ ಇಲ್ಲದ ಕಾರಣ ಹುತಾತ್ಮ ಮತ್ತು ಮಾಜಿ ಸೈನಿಕರ ಅವಲಂಬಿತರು ಕೇಳಿದಷ್ಟು ಜಮೀನು ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಜಾಗ ಲಭ್ಯವಿಲ್ಲದ ಕಡೆ ಒಂದು ನಿವೇಶನ ನೀಡಲು ಸರ್ಕಾರ ಆದೇಶಿಸಿದೆ. ಈ ಪ್ರಕಾರ ಸ್ಥಳೀಯ ಸಂಸ್ಥೆಗಳು ನಿವೇಶನ ಹಂಚಿಕೆ ಮಾಡುವಾಗ ಮೊದಲ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.