ADVERTISEMENT

ಮದ್ದೂರು ನಗರಸಭೆಗೆ ಸೇರ್ಪಡೆ: 4 ಗ್ರಾ.ಪಂ.ಗಳ ಮುಖಂಡರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:30 IST
Last Updated 4 ಅಕ್ಟೋಬರ್ 2025, 7:30 IST
   

ಮದ್ದೂರು: ನಗರಸಭೆಗೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ತಾಲ್ಲೂಕಿನ ಗೆಜ್ಜಲಗೆರೆ ಸೇರಿದಂತೆ 4 ಗ್ರಾಮ ಪಂಚಾಯಿತಿಗಳ ಮುಖಂಡರು, ರೈತ ಸಂಘದ ಕಾರ್ಯಕರ್ತರು ಶುಕ್ರವಾರ ನಗರಸಭೆ ಮುಂದೆ ರಾಜ್ಯಸರ್ಕಾರ ಹೊರಡಿಸಿದ್ದ ಅಧಿಸೂಚನಾ ರಾಜ್ಯಪತ್ರವನ್ನು ಸುಟ್ಟು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ನಾಯಕಿ ಸುನಂದಾ ಜಯರಾಮ್‌ ಮಾತನಾಡಿ, ‘ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಬಾರದು ಎಂದು ಎಷ್ಟೋ ಬಾರಿ ಗ್ರಾ.ಪಂ, ತಾಲ್ಲೂಕು ಕಚೇರಿ ಹಾಗೂ ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿದ್ದರೂ ನಗರಸಭೆಗೆ ಸೇರ್ಪಡೆಗೊಳಿಸಲು ಶಾಸಕರು ಮುಂದಾಗಿರುವುದು ಸರಿಯಲ್ಲ’ ಎಂದರು.

‘ಸೇರ್ಪಡೆ ವಿರೋಧಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆಕ್ಷೇಪಣಾ ಪತ್ರವನ್ನು ನೀಡಿದ್ದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಬೇಜಾವಾಬ್ದಾರಿ ತೋರಿದ್ದಾರೆ. ನಮ್ಮದು ಗ್ರಾಮಗಳ ಭಾರತವೇ ಹೊರತು ನಗರ ಭಾರತವಲ್ಲ’ ಎಂದರು.

ADVERTISEMENT

‘ಈಗಾಗಲೇ ಗೆಜ್ಜಲಗೆರೆ ಗ್ರಾ.ಪಂ ಗೆ ವಾರ್ಷಿಕ ₹1.75 ಆದಾಯ ಬರುತ್ತಿದೆ. ನಮ್ಮಲ್ಲಿ ಎಲ್ಲಾ ಮೂಲಸೌಕರ್ಯಗಳು ಚೆನ್ನಾಗಿಯೇ ಇರುವುದರಿಂದ ನಗರಸಭೆಗೆ ಸೇರ್ಪಡೆ ಏಕೆ ಬೇಕು?’ ಎಂದು ಪ್ರಶ್ನಿಸಿದರು.

‘ಒಂದು ವೇಳೆ ಗ್ರಾಮಗಳು ನಗರಸಭೆಗೆ ಸೇರ್ಪಡೆಯಾದರೆ ಗ್ರಾಮೀಣ ಕೃಪಾoಕ, ನರೇಗಾ ಕೆಲಸ ಕೈತಪ್ಪುವುದರ ಜೊತೆಗೆ ಆಸ್ತಿ ತೆರಿಗೆಗಳೂ ಹೆಚ್ಚಾಗುತ್ತವೆ’ ಎಂದರು.

‘ಈ ಮುಂಚೆ ಪ್ರತಿಭಟನೆ ನಡೆಸಿದ ವೇಳೆ ನಿಮ್ಮ ಜೊತೆ ಮಾತನಾಡುವುದಾಗಿ ಶಾಸಕ ಕೆ.ಎಂ ಉದಯ್ ಅವರು ತಿಳಿಸಿದ್ದರೂ ನಂತರದ ದಿನಗಳಲ್ಲಿ 4 ಗ್ರಾಮಗಳ ಮುಖಂಡರ ಸಭೆ ಕರೆದು ಅಭಿಪ್ರಾಯ ಪಡೆದು ಚರ್ಚಿಸದೆ ಏಕಾಏಕಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈಗಾಗಲೇ ರಾಜ್ಯಪತ್ರದಲ್ಲಿ ಘೋಷಣೆಯಾಗಿರುವ ನಾಲ್ಕು ಗ್ರಾ.ಪಂ.ಗಳ ಹೆಸರನ್ನು ಕೂಡಲೇ ಕೈಬಿಡಲು ಶಿಫಾರಸ್ಸು ಮಾಡಬೇಕು ಹಾಗೂ ಶಾಸಕರೇ ಈ ಹಿಂದೆ ಶಾಸಕರು ಹೇಳಿದ್ದಂತೆ ನಡೆದುಕೊಳ್ಳಬೇಕು, ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗೊರವನಹಳ್ಳಿ ಪ್ರಸನ್ನ, ಗಜ್ಜಲಗೆರೆ ಬಿಜೆಪಿ ಮುಖಂಡರಾದ ಮಹಿಂದ್ರ, ರೈತ ಸಂಘದ ಮುಖಂಡರಾದ ಲಿಂಗಪ್ಪಾಜಿ, ಜಿಲ್ಲಾ ಉಪಾಧ್ಯಕ್ಷ ಶಂಕರ್, ಗ್ರಾ.ಪಂ ಮಾಜಿ ಅಧ್ಯಕ್ಷ ರವಿ, ಮಹಿಂದ್ರ, ಸೊ.ಸಿ ಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.