ADVERTISEMENT

ಮದ್ದೂರು | ಪ್ರಚೋದನಕಾರಿ ಭಾಷಣ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 13:55 IST
Last Updated 12 ಸೆಪ್ಟೆಂಬರ್ 2025, 13:55 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ್‌</p></div>

ಬಸನಗೌಡ ಪಾಟೀಲ ಯತ್ನಾಳ್‌

   

ಮಂಡ್ಯ: ಮದ್ದೂರು ಪಟ್ಟಣದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣ ಮಾಡಿದ್ದ ಸಿ.ಟಿ.ರವಿ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧವೂ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸಿದ್ದಾರೆ. 

‘ಅನ್ಯಕೋಮಿನ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮತ್ತು ನೋವು ಉಂಟಾಗುವಂತೆ ಮಾತನಾಡಿದ್ದಾರೆ’ ಎಂದು ಇನ್‌ಸ್ಪೆಕ್ಟರ್‌ ಮಂಜುನಾಥ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಎಎಸ್ಪಿ ವರ್ಗಾವಣೆ:  ಮಂಡ್ಯದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ (ಎಎಸ್ಪಿ) ಸಿ.ಈ. ತಿಮ್ಮಯ್ಯ ಅವರನ್ನು ಸರ್ಕಾರ ದಿಢೀರ್‌ ವರ್ಗಾವಣೆ ಮಾಡಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. 

‘ಮದ್ದೂರು ಗಣೇಶೋತ್ಸವ ಮೆರವಣಿಗೆಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೂ ಎಎಸ್‌ಪಿ ತಿಮ್ಮಯ್ಯ ಅವರ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ. ಅವರ ಅಧಿಕಾರವಧಿ ಜಿಲ್ಲೆಯಲ್ಲಿ 3 ತಿಂಗಳ ಹಿಂದೆಯೇ ಮುಗಿದಿತ್ತು. ಡಿಸೆಂಬರ್‌ವರೆಗೂ ಮುಂದುವರಿಸಲು ಕೋರಿದ್ದೆ. ಆದರೆ, ಗೃಹಸಚಿವರು ಅವರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

ಪ್ರಸ್ತುತ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ-2 ಆಗಿದ್ದ ಎನ್. ನವೀನ್ ಕುಮಾರ್ ಅವರನ್ನು ಮಂಡ್ಯ ಎ.ಎಸ್.ಪಿ.-1 ಹುದ್ದೆಗೆ ನೇಮಕ ಮಾಡಲಾಗಿದೆ. ತಿಮ್ಮಯ್ಯ ಅವರನ್ನು ಮುಂದಿನ ಸ್ಥಳ ನಿಯಿಕ್ತಿಗಾಗಿ ಡಿಜಿ ಮತ್ತು ಐಜಿಪಿ ಅವರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.