ADVERTISEMENT

ಮದ್ದೂರು | ಕಾನೂನು ಸುವ್ಯವಸ್ಥೆಗೆ ಭಂಗ ತರಬೇಡಿ: ಐಜಿಪಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 6:31 IST
Last Updated 10 ಸೆಪ್ಟೆಂಬರ್ 2025, 6:31 IST
ಮದ್ದೂರಿನಲ್ಲಿ ಮಂಗಳವಾರ ಐಜಿಪಿ ಬೋರಲಿಂಗಯ್ಯ ಮತ್ತು ಎಸ್ಪಿ ಮಲ್ಲಿಕಾರ್ಜನ ಬಾಲದಂಡಿ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಪಥಸಂಚಲನ ನಡೆಸಿದರು 
ಮದ್ದೂರಿನಲ್ಲಿ ಮಂಗಳವಾರ ಐಜಿಪಿ ಬೋರಲಿಂಗಯ್ಯ ಮತ್ತು ಎಸ್ಪಿ ಮಲ್ಲಿಕಾರ್ಜನ ಬಾಲದಂಡಿ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಪಥಸಂಚಲನ ನಡೆಸಿದರು    

ಮದ್ದೂರು (ಮಂಡ್ಯ ಜಿಲ್ಲೆ): ‘ಕಾನೂನು ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಬೇಡಿ. ಪ್ರತಿಭಟನೆಗೆ ಕಾರ್ಯಕರ್ತರನ್ನು ಕರೆಸಿದ ಮೇಲೆ ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ’ ಎಂದು ಮೈಸೂರು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಅವರು ಬಿಜೆಪಿ ಮತ್ತು ಹಿಂದುತ್ವಪರ ಮುಖಂಡರಿಗೆ ಹೇಳಿದರು. 

ಪಟ್ಟಣದಲ್ಲಿ ಬಿಜೆಪಿ ಮುಖಂಡರು ಮತ್ತು ಹಿಂದುತ್ವಪರ ಸಂಘಟನೆಗಳ ಮುಖಂಡರೊಂದಿಗೆ ಅವರು ಸಭೆ ನಡೆಸಿ ಮಾತನಾಡಿ, ‘ಕಲ್ಲು ತೂರಾಟ ನಡೆಸಿ, ಶಾಂತಿ ಕದಡಿದ ತಪ್ಪಿತಸ್ಥರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಉದ್ದೇಶಪೂರ್ವಕವಾಗಿ ಯಾರಾದರೂ ಪ್ಲಾನ್ ಮಾಡಿದ್ದರೆ ಅವರಿಗೂ ಕೂಡ ಶಿಕ್ಷೆಯಾಗಲಿದೆ’ ಎಂದು ಖಡಕ್ಕಾಗಿ ನುಡಿದರು. 

ಭಾನುವಾರ ರಾತ್ರಿ ನಡೆದ ಕಲ್ಲುತೂರಾಟ ಮತ್ತು ಸೋಮವಾರ ನಡೆದ ‍ಪ್ರತಿಭಟನಾ ಮೆರವಣಿಗೆ, ಲಾಠಿಜಾರ್ಜ್ ಘಟನೆ ಬಗ್ಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಇಂದ್ರೇಶ್, ಮನ್‌ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್‌ ಜಯರಾಮ್‌ ಅವರೊಂದಿಗೆ ಐಜಿಪಿ ಚರ್ಚಿಸಿದರು.

ADVERTISEMENT

ಸೆ.10ರಂದು ನಡೆಯಲಿರುವ ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಕಾರ್ಯ, ಮೆರವಣಿಗೆ ಬಗ್ಗೆಯೂ ಸಮಾಲೋಚಿಸಿ ಮಾಹಿತಿ ಸಂಗ್ರಹಿಸಿದರು. ಹಾಗೆಯೇ ಪರಿಸ್ಥಿತಿಯ ಸೂಕ್ಷ್ಮತೆ ವಿವರಿಸಿ ಒಂದಿಷ್ಟು ಸಲಹೆ-ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಮದ್ದೂರು ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದವು. ಆದರೂ ಕೂಡ ಶೆ 80ರಷ್ಟು ಜನರು ಉದ್ರಿಕ್ತ ರೀತಿಯಲ್ಲಿ ವರ್ತಿಸಿದರು. ಈ ರೀತಿಯಾದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಘ ಪರಿವಾರದ ಮುಖಂಡ ಉಲ್ಲಾಸ್, ‘ಅವರ್ಯಾರು ಸಂಘಟನೆಯಿಂದ ಕರೆತಂದ ಜನರಲ್ಲ. ಸ್ವಯಂ ಪ್ರೇರಿತರಾಗಿ ಬಂದವರು. ಗಣೇಶ ಮೂರ್ತಿ ಮೆರವಣಿಗೆ ಮೇಲೆ ಕಲ್ಲು ಎಸೆದಿರುವುದು ಸಣ್ಣ ಘಟನೆಯಲ್ಲ. ಇದು ಅವರ ಮಾನಸಿಕತೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದರು.

ಇಂದ್ರೇಶ್ ಮಾತನಾಡಿ, ‘ಪರಿಸ್ಥಿತಿ ನಿಯಂತ್ರಣ ತಪ್ಪಲು ನಾವು ಬಿಟ್ಟಿಲ್ಲ. ಸಾಧ್ಯವಾದಷ್ಟು ನಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿ ಇಟ್ಟಿದ್ದೆವು. ಆದರೆ, ಕ್ರಿಯೆಗೆ ಪ್ರತಿಕ್ರಿಯೆ ವ್ಯರ್ಥವಾಯಿತಷ್ಟೇ’ ಎಂದು ಸ್ಪಷ್ಟನೆ ನೀಡಿದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಲಂಡಿ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಸಂಘ ಪರಿವಾರದ ಮುಖಂಡರಾದ ಉಲ್ಲಾಸ್, ಅವಿನಾಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.