ADVERTISEMENT

ಶ್ರೀರಂಗ‍ಪಟ್ಟಣ | ಮಹಾ ಶಿವರಾತ್ರಿ: ಶಿವಾಲಯಗಳಲ್ಲಿ ಪೂಜೆ, ಅನ್ನ ಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:02 IST
Last Updated 17 ಫೆಬ್ರುವರಿ 2026, 5:02 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಭಾನುವಾರ ರಾತ್ರಿ ಶಕ್ತಿ ಶನೇಶ್ವರಸ್ವಾಮಿ ದೇವರ ಉತ್ಸವ ನಡೆಯಿತು
ಶ್ರೀರಂಗಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಭಾನುವಾರ ರಾತ್ರಿ ಶಕ್ತಿ ಶನೇಶ್ವರಸ್ವಾಮಿ ದೇವರ ಉತ್ಸವ ನಡೆಯಿತು   

ಶ್ರೀರಂಗ‍ಪಟ್ಟಣ:ಮಹಾ ಶಿವರಾತ್ರಿ ನಿಮಿತ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶಿವಾಲಯಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಮುಂಜಾನೆ ವಿಶೇಷ ಪೂಜೆಗಳು ನಡೆದವು.

ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಶಕ್ತಿ ಶನೇಶ್ವರಸ್ವಾಮಿ ದೇವಾಲಯದಲ್ಲಿ ಶನೇಶ್ವರ ದೇವರ ಉತ್ಸವ ಸಂಭ್ರಮದಿಂದ ನಡೆಯಿತು. ದೇವಾಲಯ ಆವರಣದಲ್ಲಿ ಭಾನುವಾರ ರಾತ್ರಿ ಆರಂಭವಾದ ಉತ್ಸವ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಜರುಗಿತು. ಉತ್ಸವದ ಸಾಗಿದ ಮಾರ್ಗದ ಉದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿದರು. ಮಂಗಳ ವಾದ್ಯ ಸಹಿತ ನಡೆದ ಉತ್ಸವದ ಜತೆ ಹೆಂಗೆಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಈಡುಗಾಯಿ ಮತ್ತು ಕರ್ಪೂರದ ಸೇವೆಗಳು ನಡೆದವು. ದೇವಾಲಯದ ಪ್ರಧಾನ ಅರ್ಚಕ ಗೌತಮ್‌ ಶನೇಶ್ವರ ದೇವರ ಸ್ವರೂಪಿಯಾಗಿ ಕುದುರೆ ಮೇಲೆ ಕುಳಿತು ಸಾಗಿದರು. ಇದಕ್ಕೂ ಮುನ್ನ ದೇವಾಲಯದಲ್ಲಿ ಮೂಲ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚನೆ, ಅಭಿಷೇಕಗಳು ನಡೆದವು. ಸೋಮವಾರ ಮುಂಜಾನೆ ದೇವಾಲಯದ ಆವರಣದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕೂಡಲಕುಪ್ಪೆ ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಗಣಂಗೂರು: ತಾಲ್ಲೂಕಿನ ಗಣಂಗೂರು ಗ್ರಾಮದ ಶನೇಶ್ವರಸ್ವಾಮಿ ದೇವಾಲಯದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆ ವರೆಗೆ ವಿಶೇಷ ಪೂಜೆಗಳು ನಡೆದವು. ದೇವಾಲಯದ ಮುಖ್ಯ ಅರ್ಚಕ ನಾಗರಾಜಪ್ಪ ಅವರ ನೇತೃತ್ವದಲ್ಲಿ ಜಾವದ ಪೂಜೆಗಳು, ಅಭಿಷೇಕ ಮತ್ತು ಮಹಾ ಮಂಗಳಾರತಿ ನೆರವೇರಿತು. ಸೋಮವಾರ ಬೆಳಿಗ್ಗೆ ‘ಪರ’ ನಡೆಯಿತು. ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ADVERTISEMENT

ಬಾಬುರಾಯನಕೊಪ್ಪಲು: ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಐತಿಹಾಸಿಕ ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ ಶಿವಲಿಂಗಕ್ಕೆ ಬೆಳ್ಳಿಯ ಕವಚ ಧರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆ ವರೆಗೆ ಶಿವನಾಮ ಸ್ಮರಣೆ ನಡೆಯಿತು. ರುದ್ರಾಭಿಷೇಕ, ಬಿಲ್ವಾರ್ಚನೆ ಇತರ ಧಾರ್ಮಿಕ ವಿಧಿ, ವಿಧಾನಗಳು ಜತುಗಿದವು. ಭಕ್ತರ ಜಾಗರಣೆ ಇದ್ದು ಪೂಜೆ ಸಲ್ಲಿಸಿದರು. ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೂ ಅನ್ನ ಸಂತರ್ಪಣೆ ನಡೆಯಿತು. ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಪಟ್ಟಣದ ಗಂಗಾಧರೇಶ್ವರ, ಜ್ಯೋತಿರ್ಮಹೇಶ್ವರ, ಕಾಳಿಕಾಂಬ ಕಮಠೇಶ್ವರ, ಗಂಜಾಂ ಬಳಿ ದೊಡ್ಡ ಗೋಸಾಯಿಘಾಟ್‌ನ ಕಾಶಿ ವಿಶ್ವನಾಥ, ಮಂಡ್ಯಕೊಪ್ಪಲು ಬಳಿಯ ಕಾವೇರಿ ಬೋರೇದೇವರ ದೇವಾಲಯ, ಅರಕೆರೆ ಗ್ರಾಮದ ಈಶ್ವರ, ಮರಳಾಗಾಲದ ಮರಡಿಲಿಂಗೇಶ್ವರ, ಮಹೇವಪುರದ ಕಾಶಿ ವಿಶ್ವನಾಥ, ಪಾಲಹಳ್ಳಿಯ ಪಶುಪತೇಶ್ವರ, ಮಹದೇವಪುರದ ಕಾಶಿ ವಿಶ್ವನಾಥ ಸೇರಿದಂತೆ ತಾಲ್ಲೂಕಿನ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

ಶ್ರೀರಂಗ‍ಪಟ್ಟಣ ತಾಲ್ಲೂಕಿನ ಗಣಂಗೂರಿನ ಶನೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆ ‘ಪರ‘ (ಅನ್ನ ಸಂತರ್ಪಣೆ) ನಡೆಯಿತು
ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಬಳಿ ಇರುವ ಕಾಶಿವಿಶ್ವನಾಥ ದೇವರಿಗೆ ಬೆಳ್ಳಿಯ ಕವಚ ಧರಿಸಿ ಹೂವಿನ ಅಲಂಕಾರ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.