ADVERTISEMENT

ಮಳವಳ್ಳಿ ಪುರಸಭೆ ಪಕ್ಷೇತರರ ಪಾಲು

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 12:21 IST
Last Updated 4 ಸೆಪ್ಟೆಂಬರ್ 2024, 12:21 IST
ಮಳವಳ್ಳಿ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಪುಟ್ಟಸ್ವಾಮಿ, ಎನ್.ಬಸವರಾಜು(ಜಯಸಿಂಹ) ಅವರನ್ನು ಸದಸ್ಯರು ಅಭಿನಂದಿಸಿದರು.
ಮಳವಳ್ಳಿ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಪುಟ್ಟಸ್ವಾಮಿ, ಎನ್.ಬಸವರಾಜು(ಜಯಸಿಂಹ) ಅವರನ್ನು ಸದಸ್ಯರು ಅಭಿನಂದಿಸಿದರು.   

ಮಳವಳ್ಳಿ:  ಪುರಸಭೆಯು ಪಕ್ಷೇತರರ ಪಾಲಾಗಿದ್ದು, ಜೆಡಿಎಸ್-ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷರಾಗಿ 4ನೇ ವಾರ್ಡ್ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ, ಉಪಾಧ್ಯಕ್ಷರಾಗಿ 18ನೇ ವಾರ್ಡ್ ನ ಪಕ್ಷೇತರ ಸದಸ್ಯ ಎನ್.ಬಸವರಾಜು(ಜಯಸಿಂಹ) ಚುನಾಯಿತರಾದರು.

ಒಟ್ಟು 23 ಸದಸ್ಯ ಬಲ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್ 9, ಕಾಂಗ್ರೆಸ್ 5, ಬಿಜೆಪಿ 2, 7 ಮಂದಿ ಪಕ್ಷೇತರ ಆಯ್ಕೆಯಾಗಿದ್ದರು.

 ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಎಂ.ಆರ್.ರಾಜಶೇಖರ್ ಹಾಗೂ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಾದ ಎಸ್.ಕವಿತಾ ಕೃಷ್ಣ, ಎಂ.ಎನ್.ಶಿವಸ್ವಾಮಿ ಹಾಗೂ ಪಕ್ಷೇತರ ಎನ್.ಬಸವರಾಜು ನಾಮಪತ್ರ ಸಲ್ಲಿಸಿದ್ದರು. ಎಸ್.ಕವಿತಾ ಕೃಷ್ಣ ನಾಮಪತ್ರ ತಿರಸ್ಕೃತಗೊಂಡಿತು.

ADVERTISEMENT

 ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಪರವಾಗಿ 14 ಮತ, ಕಾಂಗ್ರೆಸ್ ನ ಎಂ.ಆರ್.ರಾಜಶೇಖರ್ ಪರ 9 ಮತಗಳು ಬಂದವು. 15 ಮತ ಪಡೆದ ಎನ್.ಬಸವರಾಜು ಉಪಾಧ್ಯಕ್ಷರಾಗಿ ಆಯ್ಕೆಯಾದರೆ,  ಎಂ.ಎನ್.ಶಿವಸ್ವಾಮಿ 8 ಮತ ಗಳಿಸಿದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಕೆ.ಎನ್.ಲೋಕೇಶ್ ಹಾಗೂ ಸಹಾಯಕರಾಗಿ ಗ್ರೇಡ್-2 ತಹಶೀಲ್ದಾರ್ ಬಿ.ವಿ.ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಕಾರ್ಯನಿರ್ವಹಿಸಿದ್ದರು. ಮತದಾನದ ಹಕ್ಕು ಹೊಂದಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗೈರಾಗಿದ್ದರು.

ನೂತನ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಜೆಡಿಎಸ್-ಬಿಜೆಪಿ ಮುಖಂಡರ ಹಾಗೂ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಜೆಡಿಎಸ್ ಎಸ್ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಅನ್ನದಾನಿ ಮಾತನಾಡಿ, ಎನ್‌ಡಿಎ ಮೈತ್ರಿಕೂಟ ಪುರಸಭೆಯಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್ ಮಾತನಾಡಿ, ಜೆಡಿಎಸ್-ಬಿಜೆಪಿ ಮೈತ್ರಿ ಪಾಂಡವಪುರ, ಮಳವಳ್ಳಿ ಸ್ಥಳೀಯಾಡಳಿತದಲ್ಲೂ ನಡೆದಿದೆ. ಇದು ಮತ್ತಷ್ಟು ಬಲಿಷ್ಠವಾಗಲಿದೆ ಎಂದರು.ಬಿಜೆಪಿ ಮುಖಂಡ ಜಿ.ಮುನಿರಾಜು ಮಾತನಾಡಿದರು.

ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ, ಸದಸ್ಯರಾದ ಎಂ.ಎನ್.ಕೃಷ್ಣ, ರವಿ, ಎಂ.ಟಿ.ಪ್ರಶಾಂತ್, ಟಿ.ನಂದಕುಮಾರ್, ಆರ್.ಎನ್.ಸಿದ್ದರಾಜು, ರಾಧಾ ನಾಗರಾಜು, ಭಾಗ್ಯಮ್ಮ, ಪಿ.ಕುಮಾರ್, ನೂರುಲ್ಲಾ, ಸವಿತಾ, ಮಣಿ, ನಾಗೇಶ್ ಹಾಗೂ ಜೆಡಿಎಸ್-ಬಿಜೆಪಿ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.