ADVERTISEMENT

ಮಳವಳ್ಳಿ | ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ: ಸಚಿವ ಎನ್.ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಮೇ 2025, 13:18 IST
Last Updated 10 ಮೇ 2025, 13:18 IST
ಮಳವಳ್ಳಿಯಲ್ಲಿ ಶನಿವಾರ ನಡೆದ ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯ ಸ್ವಾಮಿ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಉದ್ಘಾಟಿಸಿದರು
ಮಳವಳ್ಳಿಯಲ್ಲಿ ಶನಿವಾರ ನಡೆದ ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯ ಸ್ವಾಮಿ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಉದ್ಘಾಟಿಸಿದರು   

ಮಳವಳ್ಳಿ: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಸೋಲು ಕಂಡಿದ್ದೇವೆ. ಹೀಗಾಗಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.

ಪಟ್ಟಣದ ಸುಲ್ತಾನ್ ರಸ್ತೆಯ ಕಾಂಗ್ರೆಸ್ ನಿವೇಶನದಲ್ಲಿ ಶನಿವಾರ ಆಯೋಜಿಸಿದ್ದ ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಜನರು 2018ರಲ್ಲಿ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದ್ದರು. ನಮ್ಮ ಪಕ್ಷದ ಬೆಂಬಲದಿಂದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜಿಲ್ಲೆಯನ್ನು ಏಕೆ ಅಭಿವೃದ್ಧಿ ಮಾಡಲು ಮುಂದಾಗಲಿಲ್ಲ, ಕೃಷಿ ಪ್ರಧಾನವಾಗಿರುವ ಮಂಡ್ಯ ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಯಾಗಿ ನೀಡಿರುವ ವಿ.ಸಿ.ಫಾರಂನಲ್ಲಿ ಕೃಷಿ ವಿ.ವಿ ತೆರೆಯಲು ಇವರ ಅಣ್ಣ ಎಚ್.ಡಿ.ರೇವಣ್ಣ ವಿರೋಧಿಸುತ್ತಾರೆ. ಆದರೆ ಇವರು ಮಾತ್ರ ಸ್ವಾಗತ ಎನ್ನುತ್ತಾರೆ ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್ಸಿಗರಿಗೆ ಅನುಕಂಪ ಸೃಷ್ಟಿಸಿ ಮತ ಗಿಟ್ಟಿಸಿಕೊಳ್ಳುವುದು ಬರುವುದಿಲ್ಲ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ಎಚ್.ಡಿ. ಕುಮಾರಸ್ವಾಮಿ ಅವರಂತೆ ಬುದ್ಧಿವಂತ ರಾಜಕಾರಣ ಮಾಡುವುದು ನಮಗೆ ಸಾಧ್ಯವಿಲ್ಲ, ಜಿಲ್ಲೆಯಲ್ಲಿನ ಬಿಜೆಪಿ ಶಕ್ತಿ ಬಳಸಿಕೊಂಡು ಗೆದ್ದರು’ ಎಂದು ಹೇಳಿದರು.

‘ಮಳವಳ್ಳಿಯ ಏಳು ಜಿಲ್ಲಾ ಪಂಚಾಯಿತಿ ಹಾಗೂ ಶೇ 80ರಷ್ಟು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಕಾಣಬೇಕು. ಅದಕ್ಕಾಗಿ ಎಲ್ಲರೂ ಇಂದಿನಿಂದಲೇ ಸಿದ್ಧರಾಗಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ‘ವಿವೇಚನೆ ಹಾಗೂ ತಿಳಿವಳಿಕೆ ಇಲ್ಲದ, ಅಧಿಕಾರವಿದ್ದಾಗ ಏನೂ ಅಭಿವೃದ್ಧಿ ಮಾಡದ ಅಸಮರ್ಥ ಮಾಜಿ ಶಾಸಕ ನನ್ನ ಯೋಜನೆಗಳ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಾರೆ’ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಹೆಸರೇಳದೆ ವಾಗ್ದಾಳಿ ನಡೆಸಿದರು.

ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕ ಬಿ.ಸಿ. ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ. ಜೋಗಿಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಮನ್‌ಮುಲ್ ನಿರ್ದೇಶಕರಾದ ಅಪ್ಪಾಜಿಗೌಡ, ಡಿ.ಕೃಷ್ಣೇಗೌಡ, ಆರ್.ಎನ್.ವಿಶ್ವಾಸ್, ಪ್ರಮುಖರಾದ ಚಿದಂಬರಂ, ಎಂ.ಎಲ್.ಸುರೇಶ್, ಸಿ.ಪಿ.ರಾಜು, ದೊಡ್ಡಯ್ಯ, ಸುಷ್ಮಾ ರಾಜು, ಸುಜಾತಾ ಕೆ.ಎಂ.ಪುಟ್ಟು, ಮುಖಂಡರಾದ ಬಾಲರಾಜು ಪಾಲ್ಗೊಂಡಿದ್ದರು.

ಮೈತ್ರಿ ಪಕ್ಷಗಳನ್ನು ಸೋಲಿಸಲು ಸಂಘಟಿತರಾಗಿ

‘ಪಕ್ಷ ಮತ್ತು ಕಾರ್ಯಕರ್ತರಿಂದಲೇ ಸಚಿವ ಎಂಎಲ್ಎ ಆಗಲು ಸಾಧ್ಯ. ಕಾರ್ಯಕರ್ಯರು ಮಾತನಾಡಬೇಕು. ಅವರಿಗೆ ಸ್ಪಂದಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಮಂಡ್ಯ ಅಭಿವೃದ್ಧಿಯತ್ತ ಸಾಗುತ್ತಿದೆ ಎನ್ನುವುದು ರಾಜ್ಯಕ್ಕೆ ತಿಳಿಯಬೇಕಿದೆ. ಜಾತ್ಯತೀತ ಪಕ್ಷ ಎಂದುಕೊಂಡಿದ್ದ ಪಕ್ಷ ಕೋಮುವಾದಿ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಮೈತ್ರಿ ಪಕ್ಷವನ್ನು ಸೋಲಿಸಲು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಬೇಕು’ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.