ADVERTISEMENT

ಮಂಡ್ಯ | ಮಳವಳ್ಳಿ ಸುಂದರಮ್ಮ ನಾಟಕೋತ್ಸವ ಸೆ.9ರಿಂದ

‘ರಂಗ ಪುರಸ್ಕಾರ’ ಪ್ರಶಸ್ತಿಗೆ ಗಿರಿಜಾ ಲೋಕೇಶ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 3:51 IST
Last Updated 5 ಸೆಪ್ಟೆಂಬರ್ 2025, 3:51 IST
ಮಳವಳ್ಳಿ ಸುಂದರಮ್ಮ 
ಮಳವಳ್ಳಿ ಸುಂದರಮ್ಮ    

ಮಂಡ್ಯ: ರಂಗಬಂಡಿ ಮತ್ತು ಯೂನಿವರ್ಸಲ್ ಸೇವಾ ಟ್ರಸ್ಟ್ ವತಿಯಿಂದ ಮಳವಳ್ಳಿ ಸುಂದರಮ್ಮ ರಂಗ ಪುರಸ್ಕಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಸೆ.9ರ ಸಂಜೆ 6 ಗಂಟೆಗೆ ಮಳವಳ್ಳಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ ತಿಳಿಸಿದರು.

ರಂಗಭೂಮಿಯಿಂದ ನಟನೆ ಕಲಿತು, ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ಗಿರಿಜಾ ಲೋಕೇಶ್ ಅವರನ್ನು ‘ರಂಗ ಪುರಸ್ಕಾರ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಶಾಸಕ ಪಿ.ಎಂ.ನರೇಂದ್ರ ಸ್ವಾಮಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ ಪ್ರಶಸ್ತಿ ಅವರು ಪ್ರದಾನ ಮಾಡಲಿದ್ದಾರೆ. ಯೂನಿವರ್ಸಲ್ ಸೇವಾ ಟ್ರಸ್ಟ್‌ ಕಾರ್ಯದರ್ಶಿ ಟಿ.ಎಂ.ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. 

ADVERTISEMENT

ಮುಖ್ಯ ಅತಿಥಿಗಳಾಗಿ ಬಿ.ಎಂ. ಎಜುಕೇಷನಲ್ ಟ್ರಸ್ಟ್‌ ಕಾರ್ಯದರ್ಶಿ ಎಂ.ರಾಮಕೃಷ್ಣ, ರಂಗಕರ್ಮಿ ಮಂಡ್ಯ ರಮೇಶ್, ಮನ್‌ಮುಲ್ ನಿರ್ದೇಶಕ ಆರ್.ಎನ್. ವಿಶ್ವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸಿ.ಚೌಡಯ್ಯ, ಕನ್ನಡಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್, ವಕೀಲ ಜಗದೀಶ್, ಚಿತ್ರ ನಿರ್ಮಾಪಕ ಟಿ.ಸಿ.ಚಿಕ್ಕೇಗೌಡ, ನವೀನ್ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು. 

ಗೋಷ್ಠಿಯಲ್ಲಿ ಯೂನಿವರ್ಸಲ್ ಸೇವಾ ಟ್ರಸ್ಟ್‌ ಕಾರ್ಯದರ್ಶಿ ಟಿ.ಎಂ.ಪ್ರಕಾಶ್, ವಿಶ್ವಮಾನವ ವಿಚಾರವೇದಿಕೆಯ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್, ರಂಗಬಂಡಿ ಉಪಾಧ್ಯಕ್ಷ ಮಧುಕರ ಇದ್ದರು.

ನಾಟಕದ ರಾಣಿ: 

ರಂಗಭೂಮಿಯಲ್ಲಿ ಮಹಿಳೆಯರು ಅಭಿನಯಿಸಲು ವಿರಳವಾಗಿದ್ದ ಕಾಲದಲ್ಲಿ ಮಳವಳ್ಳಿ ಸುಂದರಮ್ಮ ರಂಗಪ್ರವೇಶ ಮಾಡಿದವರು. ತಮ್ಮ ಅಭಿನಯ ಮತ್ತು ಗಾಯನದಿಂದ ಸಹಸ್ರಾರು ಪ್ರೇಕ್ಷಕರಿಗೆ ಮೋಡಿ ಮಾಡಿದವರು. ಸಂಗೀತ ಮತ್ತು ನಾಟಕ ಪರಂಪರೆಯ ಕುಟುಂಬದಲ್ಲಿ ಬೆಳೆದು ಬಂದ ಸುಂದರಮ್ಮ ತಮ್ಮ ಹೆಸರಿಗೆ ತಕ್ಕಂತೆ ಸುಂದರವಾಗಿಯೂ ಇದ್ದರು. 

‘ನಾಟಕದ ರಾಣಿ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದ ಸುಂದರಮ್ಮ ನಿಜಕ್ಕೂ ರಂಗಭೂಮಿಯ ರಾಣಿಯೇ ಆಗಿದ್ದರು. ಗುಬ್ಬಿ ನಾಟಕ ಕಂಪನಿಯಲ್ಲಿ ಒಬ್ಬ ನಟಿಯಾಗಿ ಆಗಿನ ಕಾಲಕ್ಕೆ ಶೇ 5ರಷ್ಟು ಪಾಲನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು. ಇವರ ಅಭಿನಯ ಶೈಲಿ ಮತ್ತು ರಂಗಭೂಮಿಯ ಬದ್ಧತೆ ಇಂದಿನ ಪೀಳಿಗೆಗೂ ಮಾರ್ಗದರ್ಶನವಾಗುವಂತದ್ದು’ ಎಂದು ಶ್ರೀನಿವಾಸ ಜಿ.ಕಪ್ಪಣ್ಣ ಲೇಖನದಲ್ಲಿ ತಿಳಿಸಿದ್ದಾರೆ. 

ನಾಟಕೋತ್ಸವದ ವಿವರ  ಸೆ.9:
ನಟನ ಮೈಸೂರು ವತಿಯಿಂದ ‘ಸ್ಥಾವರವೂ ಜಂಗಮ’ ಸೆ.10: ಬೆಂಗಳೂರು ವಿವಿ ವತಿಯಿಂದ ‘ಮಂಟೇಸ್ವಾಮಿ ಕಥಾ ಪ್ರಸಂಗ’ ಸೆ.11: ಶ್ರೀರಂಗಪಟ್ಟಣದ ಗಮ್ಯ ಸಂಸ್ಥೆ ವತಿಯಿಂದ ‘ಪರಿಣಯ ಪ್ರಸಂಗ’ ಸೆ.12: ಮೈಸೂರಿನ ಸುರುಚಿ ರಂಗಮನೆ ವತಿಯಿಂದ ‘ಶ್ರೀಮದ್‌ ರಾಮಾಯಣ’ ಸೆ.13: ಮೈಸೂರಿನ ನಿರಂತರ ಫೌಂಡೇಶನ್‌ ವತಿಯಿಂದ ‘ಕೂಡಲ ಸಂಗಮ’ ಸೆ.14: ಕಲಾಗಂಗೋತ್ರಿ ವತಿಯಿಂದ ‘ಮುಖ್ಯಮಂತ್ರಿ’ ನಾಟಕ  (ನಾಟಕೋತ್ಸವ ಸಂಜೆ 6.30ಕ್ಕೆ ಆರಂಭ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.