ADVERTISEMENT

ನೆರೆ ಸಂತ್ರಸ್ತರಿಗೆ ಸ್ಪಂದಿಸಲು ಕೇರಳ ಸಿಎಂಗೆ ‘ಪತ್ರ ಚಳವಳಿ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:54 IST
Last Updated 2 ಜನವರಿ 2026, 6:54 IST
ರಾಜ್ಯದ ನೆರೆ ಸಂತ್ರಸ್ತರಿಗೆ ಸೂರು ನೀಡಲು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಟ್ವೀಟ್‌ ಮಾಡಬೇಕು ಎಂದು ಒತ್ತಾಯಿಸಿ, ಮಂಡ್ಯ ನಗರದ ಜಿಲ್ಲಾ ಅಂಚೆ ಕಚೇರಿ ಮುಂಭಾಗ ಬಿಜೆಪಿ ವತಿಯಿಂದ ಗುರುವಾರ ‘ಪತ್ರ ಚಳವಳಿ’ ನಡೆಯಿತು 
ರಾಜ್ಯದ ನೆರೆ ಸಂತ್ರಸ್ತರಿಗೆ ಸೂರು ನೀಡಲು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಟ್ವೀಟ್‌ ಮಾಡಬೇಕು ಎಂದು ಒತ್ತಾಯಿಸಿ, ಮಂಡ್ಯ ನಗರದ ಜಿಲ್ಲಾ ಅಂಚೆ ಕಚೇರಿ ಮುಂಭಾಗ ಬಿಜೆಪಿ ವತಿಯಿಂದ ಗುರುವಾರ ‘ಪತ್ರ ಚಳವಳಿ’ ನಡೆಯಿತು    

ಮಂಡ್ಯ: ರಾಜ್ಯದ ನೆರೆ ಸಂತ್ರಸ್ತರಿಗೆ ಮತ್ತು ವಸತಿ ಇಲ್ಲದ ಬಡವರಿಗೆ ಸೂರು ನೀಡಲು ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಕೇರಳ ರಾಜ್ಯದ ಸಿಎಂ ಪಿಣರಾಯಿ ವಿಜಯನ್‌ ಅವರು ಟ್ವೀಟ್‌ ಮಾಡಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು. 

ನಗರದ ಜಿಲ್ಲಾ ಅಂಚೆ ಕಚೇರಿ ಮುಂಭಾಗ ಬಿಜೆಪಿ ವತಿಯಿಂದ ಗುರುವಾರ ‘ಪತ್ರ ಚಳವಳಿ’ ನಡೆಸಿದರು. ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರುವಷ್ಟು ಶಕ್ತಿ ಹೊಂದಿರುವ ಪಿಣರಾಯಿ ವಿಜಯನ್‌ ಅವರು ರಾಜ್ಯದ ಜನರ ಸಂಕಷ್ಟ ನಿವಾರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. 

ಬೆಂಗಳೂರಿನ ಕೋಗಿಲು ಬಡಾವಣೆಯ ನಿವಾಸಿಗಳ ಬಗ್ಗೆ ಮಾನವೀಯತೆ ತೋರಿಸಿ, ಪರ್ಯಾಯ ವ್ಯವಸ್ಥೆ ಮಾಡಿ ಎಂದು ಕೇರಳದ ಸಿಎಂ ಹೇಳಿದ ತಕ್ಷಣ, ಕರ್ನಾಟಕ ಸರ್ಕಾರ ಬೆಚ್ಚಿಬಿದ್ದು ಬಯ್ಯಪ್ಪನ ಹಳ್ಳಿಯಲ್ಲಿ ಹೊಸ ಮನೆ ಕೊಡಲು ಮುಂದಾಗಿದೆ. ಕೇರಳ ಸಿಎಂ ಶಕ್ತಿ ಎಂಥದ್ದು ಎಂಬುದು ಕನ್ನಡಿಗರಿಗೆ ಅರ್ಥವಾಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜ್ಯ ಸರ್ಕಾರವನ್ನು ಟೀಕಿಸಿದರು. 

ADVERTISEMENT

ರಾಜ್ಯದಲ್ಲಿ ‍ಪ್ರವಾಹ, ಮಳೆ ಹಾನಿ, ಭೂಕುಸಿತ ಸೇರಿದಂತೆ ವಿವಿಧ ರೀತಿಯ ಪ್ರಕೃತಿ ವಿಕೋಪಕ್ಕೆ 14 ಸಾವಿರ ಮಂದಿ ಮನೆ ಕಳೆದುಕೊಂಡಿದ್ದಾರೆ. ಸೂರಿಲ್ಲದೆ ಪ್ಲಾಸ್ಟಿಕ್‌ ಶೆಡ್‌ಗಳಲ್ಲಿ ದಿನ ದೂಡುತ್ತಿದ್ದಾರೆ. ವಸತಿ ಯೋಜನೆಗಾಗಿ ಚಾತಕ ಪಕ್ಷಿಯಂತೆ ಸಾವಿರಾರು ಮಂದಿ ಕಾಯುತ್ತಿದ್ದರೂ ರಾಜ್ಯ ಸರ್ಕಾರ ನೆರವಿಗೆ ಧಾವಿಸುತ್ತಿಲ್ಲ ಎಂದು ಆರೋಪಿಸಿದರು. 

ಕೇರಳ ರಾಜ್ಯದಲ್ಲಿನ ಆನೆ ಕಾಲ್ತುಳಿತಕ್ಕೆ ಕರ್ನಾಟಕ ಸರ್ಕಾರ ಪರಿಹಾರ ಕೊಟ್ಟಾಗ, ಕೇರಳದಲ್ಲಿ ಮನೆ ಕಟ್ಟಿಕೊಡಲು ನಮ್ಮ ಸರ್ಕಾರ ಹಣ ಕೊಟ್ಟಾಗ ಕೇರಳ ಮುಖ್ಯಮಂತ್ರಿಯ ಶಕ್ತಿ ಏನು ಎಂಬುದು ಅರ್ಥವಾಗಿದೆ ಎಂದು ಹೇಳಿದರು. 

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಸಿ.ಟಿ. ಮಂಜುನಾಥ್‌, ಶಿವಕುಮಾರ್‌ ಆರಾಧ್ಯ, ಹೊಸಹಳ್ಳಿ ಶಿವು, ಮಾದರಾಜ ಅರಸು, ಶಿವಣ್ಣ, ಮಹಾಂತಪ್ಪ, ಆನಂದ್, ಶಿವಲಿಂಗಪ್ಪ, ಯಲ್ಲೇಗೌಡ, ಪ್ರಸನ್ನ, ಯೋಗೇಶ್‌ ಮುಂತಾದವರು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.