ADVERTISEMENT

ಮಂಡ್ಯ | ಕಾವೇರಿ ನದಿಯ ಬಫರ್‌ ಜೋನ್‌: ಒತ್ತುವರಿ ತೆರವಿಗೆ ಗಡುವು

ಕಾವೇರಿ ನದಿಯ ಪರಿಸರ ಸೂಕ್ಷ್ಮ ವಲಯದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ: ಉಪಲೋಕಾಯುಕ್ತರಿಂದ ಕಟ್ಟುನಿಟ್ಟಿನ ಆದೇಶ

ಸಿದ್ದು ಆರ್.ಜಿ.ಹಳ್ಳಿ
Published 11 ನವೆಂಬರ್ 2025, 2:27 IST
Last Updated 11 ನವೆಂಬರ್ 2025, 2:27 IST
ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದೊಡ್ಡಿ ನಾಲೆ ಅಣೆಕಟ್ಟೆ ಸಮೀಪದ ಕಾವೇರಿ ನದಿಯ ದೃಶ್ಯ 
ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದೊಡ್ಡಿ ನಾಲೆ ಅಣೆಕಟ್ಟೆ ಸಮೀಪದ ಕಾವೇರಿ ನದಿಯ ದೃಶ್ಯ    
ನದಿ ದಡದಲ್ಲಿ ಪ್ರವಾಸಿಗರ ಮೋಜು ಮಸ್ತಿ | ಬಫರ್‌ ಜೋನ್‌ನಲ್ಲಿ ಅಕ್ರಮವಾಗಿ ತಲೆ ಎತ್ತಿದ ರೆಸಾರ್ಟ್‌, ಹೋಂಸ್ಟೇ | ಪ್ರಭಾವಿಗಳ ಒತ್ತಡದಿಂದ ಒತ್ತುವರಿ ತೆರವಿಗೆ ಅಡ್ಡಿ–ಆರೋಪ

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದೊಡ್ಡಿ ನಾಲೆ ಅಣೆಕಟ್ಟೆ ಸಮೀಪದ ಕಾವೇರಿ ನದಿಯ ಬಫರ್‌ ಜೋನ್‌ ಮತ್ತು ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮ ರೆಸಾರ್ಟ್‌, ಹೋಂಸ್ಟೇಗಳ ಕಟ್ಟಡಗಳು ತಲೆ ಎತ್ತಿದ್ದು, ಇವುಗಳನ್ನು ತೆರವುಗೊಳಿಸಿ ವರದಿ ನೀಡಲು ಉಪ ಲೋಕಾಯುಕ್ತರು ನ.27ರ ಗಡುವು ನೀಡಿದ್ದಾರೆ. 

ಮೇ 26ರಿಂದ 29ರವರೆಗೆ ಉಪಲೋಕಾಯುಕ್ತ–2 ನ್ಯಾಯಮೂರ್ತಿ ಬಿ.ವೀರಪ್ಪ ಅವರ ತಂಡ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭ ಕಾವೇರಿ ನದಿ ಜಾಗ ಒತ್ತುವರಿ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಇದನ್ನು ಆಧರಿಸಿ, ಜೂನ್‌ 10ರಂದು ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿತ್ತು. 

ಈ ಪ್ರಕರಣದ ಸಂಬಂಧ, ಕೆಲವು ರೆಸಾರ್ಟ್‌ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ರೆಸಾರ್ಟ್‌ ಮಾಲೀಕರು ಭೂದಾಖಲೆ ಮತ್ತು ಇತರ ಅಗತ್ಯ ದಾಖಲೆಗಳನ್ನು ಕಾವೇರಿ ನೀರಾವರಿ ನಿಗಮಕ್ಕೆ ಸಲ್ಲಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿತ್ತು. ಜೊತೆಗೆ ನದಿ ಪ್ರದೇಶ ಒತ್ತುವರಿಯಾಗಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಎಂಬ ಆದೇಶವನ್ನೂ ಹೈಕೋರ್ಟ್‌ ನೀಡಿತ್ತು. 

ADVERTISEMENT

ತೆರವು ಕಾರ್ಯ ಅಪೂರ್ಣ: 

ತಹಶೀಲ್ದಾರ್‌ ಚೇತನಾ ಯಾದವ್ ನೇತೃತ್ವದಲ್ಲಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಅ.8 ಮತ್ತು 9ರಂದು ಎರಡು ದಿನ ಕಾವೇರಿ ನದಿ ಖರಾಬು ಜಾಗದ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿತ್ತು. ಆದರೆ, ರಾಜಕೀಯ ಮತ್ತು ಪ್ರಭಾವಿಗಳ ಒತ್ತಡದಿಂದ ತೆರವು ಕಾರ್ಯಾಚರಣೆ ಅರ್ಧಕ್ಕೆ ಮೊಟಕುಗೊಂಡಿತು ಎಂಬ ಆರೋಪಗಳು ಕೇಳಿಬಂದಿವೆ. 

ಉಪಲೋಕಾಯುಕ್ತರ ಅಸಮಾಧಾನ:

ತೆರವು ಕಾರ್ಯಾಚರಣೆ ಬಗ್ಗೆ ಕಂದಾಯ, ಕಾವೇರಿ ನೀರಾವರಿ ನಿಗಮ ಹಾಗೂ ಇನ್ನಿತರ ಆರು ಇಲಾಖೆಗಳ ಅಧಿಕಾರಿಗಳು ಸಲ್ಲಿಸಿದ ಜಂಟಿ ತನಿಖಾ ವರದಿಯ ಬಗ್ಗೆ ಉಪಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಭೂಪರಿವರ್ತನೆಯಾಗದ ಜಾಗದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ರೆಸಾರ್ಟ್‌ ಮತ್ತು ಹೋಮ್‌ಸ್ಟೇಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ? ಸಂಬಂಧಿತ ಇಲಾಖೆಯಿಂದ ಪರವಾನಗಿ ಪಡೆಯದೆ ವಾಣಿಜ್ಯ ಕಟ್ಟಡಗಳನ್ನು ಹೇಗೆ ಕಟ್ಟಿದ್ದಾರೆ? ಎಂದು ಗರಂ ಆಗಿದ್ದಾರೆ. 

ಕಂದಾಯ, ಕಾವೇರಿ ನೀರಾವರಿ ನಿಗಮ, ಪ್ರವಾಸೋದ್ಯಮ ಇಲಾಖೆ, ಭೂಮಾಪನ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವನ್ಯಜೀವಿ ವಿಭಾಗದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮತ್ತು ಕಾನೂನುಬದ್ಧವಾಗಿ ನಿರ್ವಹಿಸಿಲ್ಲ. ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ನಿರ್ಮಿಸಿರುವ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಿರುವ ಬಗ್ಗೆ ಸಮರ್ಪಕವಾದ ವರದಿ ನೀಡಿಲ್ಲ ಎಂದು ಉಪಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಕೆಆರ್‌ಎಸ್‌ ಮುನ್ನೀರಿನಲ್ಲಿ ಆದ ಒತ್ತುವರಿ ತೆರವಿಗೆ ಲೋಕಾಯುಕ್ತ ಸಂಸ್ಥೆ ಮತ್ತು ಹಿನ್ನೀರಿನಲ್ಲಿ ಆಗಿರುವ ಒತ್ತುವರಿ ತೆರವಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆದೇಶ ನೀಡಿರುವುದರಿಂದ, ಅಧಿಕಾರಿಗಳು ತೆರವು ಕಾರ್ಯವನ್ನು ನಿರ್ದಾಕ್ಷಿಣ್ಯವಾಗಿ ನಡೆಸಿದರೆ ‘ಕಾವೇರಿ ನದಿ ಮತ್ತು ಅಣೆಕಟ್ಟೆ’ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ರೈತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಸ್ಥಳ ಪರಿಶೀಲಿಸಿ ನದಿ ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮವಹಿಸುತ್ತೇವೆ. ಬಫರ್‌ಜೋನ್‌ ವಿಸ್ತೀರ್ಣದ ಬಗ್ಗೆ ನಿಖರ ಮಾಹಿತಿ ಪಡೆಯಬೇಕಿದೆ
ಶ್ರೀನಿವಾಸ್‌ ಉಪವಿಭಾಗಾಧಿಕಾರಿ ಪಾಂಡವಪುರ

ಪಾಂಡವಪುರ ಎ.ಸಿ.ಗೆ ವಾರಂಟ್‌

ಪಾಂಡವಪುರ ಉಪವಿಭಾಗಾಧಿಕಾರಿ (ಎ.ಸಿ) ಶ್ರೀನಿವಾಸ್‌ ಅವರು ನದಿ ಜಾಗ ಒತ್ತುವರಿ ತೆರವು ಕಾರ್ಯದ ಉಸ್ತುವಾರಿ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಮತ್ತು ಲೋಕಾಯುಕ್ತ ಸಂಸ್ಥೆ ನೀಡಿದ ಆದೇಶವನ್ನು ಪಾಲನೆ ಮಾಡಿಲ್ಲ ಎಂಬ ಆರೋಪದ ಮೇರೆಗೆ ವಾರಂಟ್‌ ನೀಡಿ ಎಚ್ಚರಿಕೆ ನೀಡಲಾಗಿದೆ.   ಕಾವೇದಿ ನದಿಯ ಬಫರ್‌ ಜೋನ್‌ನಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಸೂಕ್ತ ವರದಿಯನ್ನು ನವೆಂಬರ್‌ 27ರೊಳಗೆ ಖುದ್ದಾಗಿ ಸಲ್ಲಿಸಲು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಗಡುವು ನೀಡಿದ್ದಾರೆ. 

ಅಳತೆ ಕಾರ್ಯಕ್ಕೆ ತಂಡ ರಚನೆ

ಬಂಗಾರದೊಡ್ಡಿ ನಾಲೆ ಅಣೆಕಟ್ಟೆಯ ಸಮೀಪ ಹಾಗೂ ಕಾವೇರಿ ನದಿಯ ದಂಡೆಯಲ್ಲಿ ಕೆಲವರು ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಭೂಪರಿವರ್ತನೆ (ಎನ್‌.ಎ) ಮಾಡದೇ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಬಫರ್‌ ಜೋನ್‌ ಗುರುತಿಸಿ ಒತ್ತುವರಿ ತೆರವುಗೊಳಿಸಲು ಉಪಲೋಕಾಯುಕ್ತರು ಆದೇಶಿಸಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಹಶೀಲ್ದಾರ್‌ ಚೇತನಾ ಯಾದವ್‌ ಅವರು ಭೂಮಾಪಕರು ಕಂದಾಯ ನಿರೀಕ್ಷಕ ಮತ್ತು ಗ್ರಾಮ ಆಡಳಿತ ಅಧಿಕಾರಿ ಒಳಗೊಂಡ ತಂಡ ರಚಿಸಿ ನ.17ರಂದು ಅಳತೆ ಕಾರ್ಯ ಕೈಗೊಳ್ಳಲು ಸೂಚಿಸಿದ್ದಾರೆ. 

ಡಿ.ಜೆ ಸದ್ದು; ಪಕ್ಷಿಗಳಿಗೆ ಆಪತ್ತು

ಕಾವೇರಿ ನದಿಯ ದಡದಲ್ಲಿರುವ ಬಾರ್‌ ಮತ್ತು ಹೋಟೆಲ್‌ಗಳಲ್ಲಿ ಪಟಾಕಿ ಸಿಡಿಸಿ ಡಿ.ಜೆ.ಯನ್ನು ಜೋರಾಗಿ ಹಾಕಿಕೊಂಡು ಮೋಜು–ಮಸ್ತಿ ಮಾಡುವುದರಿಂದ ಶಬ್ದ ಮಾಲಿನ್ಯ ಉಂಟಾಗಿ ಪಕ್ಕದಲ್ಲೇ ಇರುವ ಶ್ರೀರಂಗಪಟ್ಟಣ ಪಕ್ಷಿಧಾಮದಲ್ಲಿನ ಪಕ್ಷಿಗಳು ಮತ್ತು ಗೂಳಿತಿಟ್ಟು ಸ್ಥಳದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಉಪಲೋಕಾಯುಕ್ತರ ಬಳಿ ದೂರಿದ್ದಾರೆ.  ಬಲಮುರಿಯಲ್ಲಿ ಹೋಟೆಲ್‌ ಮತ್ತು ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳನ್ನು ಪರವಾನಗಿ ಪಡೆಯದೆ ಅಕ್ರಮವಾಗಿ ನಡೆಸುತ್ತಿದ್ದು ಯಾವುದೇ ಇತಿಮಿತಿ ಇಲ್ಲದೇ ಮೋಜು ಮಸ್ತಿ ನಡೆಸಲಾಗುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.