ADVERTISEMENT

‘ಧಾರಾವಿ’ ಕೊಳೆಗೇರಿಯಿಂದ ಮಂಡ್ಯಕ್ಕೆ ಬಂದವರೆಷ್ಟು?: ವಲಸಿಗರ ಪತ್ತೆಗೆ ಸೂಚನೆ

ಎಂ.ಎನ್.ಯೋಗೇಶ್‌
Published 4 ಮೇ 2020, 21:04 IST
Last Updated 4 ಮೇ 2020, 21:04 IST
ಕೊಲ್ಹಾಪುರದಲ್ಲಿ ಸಿಲುಕಿರುವ ವಲಸಿಗರು ಕೋವಿಡ್‌ ಪರೀಕ್ಷಾ ವರದಿ ಪ್ರದರ್ಶಿಸಿದರು
ಕೊಲ್ಹಾಪುರದಲ್ಲಿ ಸಿಲುಕಿರುವ ವಲಸಿಗರು ಕೋವಿಡ್‌ ಪರೀಕ್ಷಾ ವರದಿ ಪ್ರದರ್ಶಿಸಿದರು   

ಮಂಡ್ಯ: ಮುಂಬೈನ ಧಾರಾವಿ ಕೊಳೆಗೇರಿಯಿಂದಲೇ ಜಿಲ್ಲೆಗೆ ಒಂದು ಸಾವಿರಕ್ಕೂ ಹೆಚ್ಚು ಜನರು ವಾಪಸ್ಸಾಗಿದ್ದಾರೆ. ಅವರನ್ನು ಪತ್ತೆ ಮಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ಧಾರಾವಿ ಕೊಳೆಗೇರಿ ಸದ್ಯ ಕೋವಿಡ್‌ ಪೀಡಿತವಾಗಿದ್ದು, ದೇಶವನ್ನೇ ತಲ್ಲಣಗೊಳಿಸಿದೆ. ಕೆ.ಆರ್‌.ಪೇಟೆ, ನಾಗಮಂಗಲ ಹಾಗೂ ಪಾಂಡವಪುರದಿಂದ ವಲಸೆ ಹೋಗಿದ್ದ ಸಾವಿರಾರು ಜನರು ಅಲ್ಲಿಯೇ ವಾಸವಾಗಿದ್ದರು.

ಹೆಚ್ಚಿನವರು ಸಣ್ಣಪುಟ್ಟ ವ್ಯಾಪಾರಿಗಳು. ಲಾಕ್‌ಡೌನ್‌ ಘೋಷಣೆಯಾದ ನಂತರ ಸಿಕ್ಕಸಿಕ್ಕ ವಾಹನಗಳಲ್ಲಿ ಮರಳಿದ್ದಾರೆ. ಹೆಚ್ಚಿನವರು ನಾಗಮಂಗಲ, ಕೆ.ಆರ್‌.ಪೇಟೆ ತಾಲ್ಲೂಕಿನವರು. ಅವರನ್ನು ಪತ್ತೆ ಮಾಡುವಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಶಿಕ್ಷಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ADVERTISEMENT

‘ಧಾರಾವಿ ಸೀಲ್‌ಡೌನ್‌ ಆಗುವವರೆಗೂ ಕನ್ನಡಿಗರು ತಮ್ಮ ಊರುಗಳಿಗೆ ತೆರಳುತ್ತಲೇ ಇದ್ದರು’ ಎಂದು ಧಾರಾವಿಗೆ 2 ಕಿ.ಮೀ ದೂರದಲ್ಲಿರುವ ವಡಾಲ ನಿವಾಸಿ, ಕೆ.ಆರ್‌.ಪೇಟೆ ತಾಲ್ಲೂಕು, ಕರೋಟಿ ಗ್ರಾಮದ ಶಿವಕುಮಾರ್‌ ತಿಳಿಸಿದರು.

ಧಾರಾವಿಯಲ್ಲಿದ್ದ ಕಿಕ್ಕೇರಿ ಸಮೀಪದ ಹಳ್ಳಿಯೊಂದರ ದಂಪತಿ ಇಬ್ಬರು ಮಕ್ಕಳೊಂದಿಗೆ ಬೈಕ್‌ನಲ್ಲೇ ತವರಿಗೆ ಮರಳಿದ್ದಾರೆ. ‘ಮಹಾರಾಷ್ಟ್ರ ಗಡಿಯಲ್ಲೇ ಒಂದು ರಾತ್ರಿ ಕಾದು ಕುಳಿತಿದ್ದೆವು. ಮಧ್ಯರಾತ್ರಿ ₹ 4 ಸಾವಿರ ಲಂಚ ಕೊಟ್ಟು ಗಡಿ ದಾಟಿದೆವು. ಈಗ ಊರು ತಲುಪಿ ನೆಮ್ಮದಿಯಾಗಿದ್ದೇವೆ’ ಎನ್ನುತ್ತಾರೆ ಆ ದಂಪತಿ.

ಗರ್ಭಿಣಿಗೆ, ವಿದ್ಯಾರ್ಥಿನಿಗೆ ಸೋಂಕು:ಮುಂಬೈನಿಂದ ಕೆ.ಆರ್‌.ಪೇಟೆ ತಾಲ್ಲೂಕಿಗೆ ಬಂದಿರುವ ಗರ್ಭಿಣಿ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯೊಬ್ಬರಿಗೂ ಸೋಂಕು ಇರುವುದು ದೃಢಪಟ್ಟಿದೆ.

ವಲಸಿಗರ ಗೋಳು
ಜಿಲ್ಲೆಯತ್ತ ಹೊರಟಿದ್ದ ನೂರಾರು ವಲಸಿಗರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿಸಿಲುಕಿದ್ದಾರೆ. ಅಲ್ಲಿಯ ಜಿಲ್ಲಾಡಳಿತ ಅವರನ್ನು ಕ್ವಾರಂಟೈನ್‌ ಮಾಡಿದೆ.

‘ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ. ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿ’ ಎಂದು ಅಲ್ಲಿ ಸಿಲುಕಿರುವ ತೆಂಗಿನಘಟ್ಟ ಗ್ರಾಮದ ಕುಮಾರ್‌ ಕೋರಿದರು.

**

ಧಾರಾವಿ ಕೊಳೆಗೇರಿಯಿಂದ ಬಂದವರನ್ನು ಗುರುತಿಸಿ, ಅವರಿಗೆ ತಕ್ಷಣವೇ ಕೋವಿಡ್‌ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದ್ದೇನೆ.
-ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.