ADVERTISEMENT

ಮಂಡ್ಯ | ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಿ: ಕುಮಾರ

2025-26ರಲ್ಲಿ ಜಿಲ್ಲೆಯಲ್ಲಿ 17.58 ಟನ್ ಮೀನು ಉತ್ಪಾದನೆ: ಜಿಲ್ಲಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 7:04 IST
Last Updated 21 ಜನವರಿ 2026, 7:04 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ 2025-26ನೇ ಸಾಲಿನ ‘ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ’ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ 2025-26ನೇ ಸಾಲಿನ ‘ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ’ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು   

ಮಂಡ್ಯ: ‘ರೈತರ ಆದಾಯ ಹೆಚ್ಚಿಸುವಲ್ಲಿ ಕೃಷಿಯಷ್ಟೇ ಮಹತ್ವದ ಪಾತ್ರವನ್ನು ಮೀನುಗಾರಿಕೆಯು ವಹಿಸುತ್ತದೆ. ಮೀನು ಸಾಕಾಣಿಕೆ ಕುರಿತು ರೈತರಿಗೆ ತರಬೇತಿ ನೀಡಿ ಜಿಲ್ಲೆಯಲ್ಲಿ ಮೀನುಗಾರಿಕೆಯನ್ನು ಉತ್ತೇಜಿಸಿ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ 2025-26ನೇ ಸಾಲಿನ ಕೇಂದ್ರ ಪುರಸ್ಕೃತ ‘ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ’ (ಪಿ.ಎಂ.ಎಂ.ಎಸ್‌.ವೈ)ಯನ್ನು ಅನುಷ್ಠಾನ ಮತ್ತು ಮೇಲುಸ್ತುವಾರಿ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ 177 ಕೆರೆಗಳು ಇವೆ ಎಂದು ಹೇಳಿದರು.

ಈಗಾಗಲೇ ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯ ಹಲವು ಕೆರೆಗಳಿಗೆ ಟೆಂಡರ್ ಕರೆಯಲಾಗಿದೆ. ಜಿಲ್ಲೆಯಲ್ಲಿ 2021ರಿಂದ 2025ನೇ ಸಾಲಿನವರೆಗೂ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 742 ಫಲಾನುಭವಿಗಳಿದ್ದಾರೆ. ಇಲ್ಲಿಯವರೆಗೂ 124 ಫಲಾನುಭವಿಗಳಿಗೆ ₹5.13 ಕೋಟಿ ಸಹಾಯಧನ ನೀಡಲಾಗಿದೆ ಎಂದರು.

ADVERTISEMENT

ಮೀನುಗಾರಿಕೆ ಇಲಾಖೆಯಿಂದ 1 ಹೆಕ್ಟೇರ್ ಪ್ರದೇಶದಲ್ಲಿ ಮೀನು ಸಾಕಾಣಿಕೆಗೆ ಮಾಡಲು ₹7 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಶೇ 60ರಷ್ಟು ಸಬ್ಸಿಡಿ ಹಾಗೂ ಸಾಮಾನ್ಯ ವರ್ಗಗಳಿಗೆ ಶೇ 40ರಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಿದರು.

ಮೀನುಗಾರಿಕೆ ಕುರಿತು ಸೂಕ್ತ ತರಬೇತಿ ನೀಡಿ. ಮೀನುಗಾರರು ಹಾಗೂ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಬೇಕು. ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 30 ಸಾವಿರಕ್ಕೂ ಹೆಚ್ಚು ಟನ್ ಮೀನು ಉತ್ಪಾದನೆ ಆಗುತ್ತಿದೆ. ಕರಾವಳಿ ಹೊರತುಪಡಿಸಿ ಮೀನುಗಾರಿಕೆಯಲ್ಲಿ ರಾಜ್ಯದಲ್ಲಿ ಜಿಲ್ಲೆ ಹತ್ತನೇ ಸ್ಥಾನದೊಳಗಿದೆ ಎಂದು ಹೇಳಿದರು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಾಬಾಸಾಬ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಲೋಕೇಶ್, ಪೂಜಾಶ್ರೀ, ಪುಷ್ಪಲತಾ, ಜಗದೀಶ್ ಟಿ.ಡಿ, ಮಹದೇವಸ್ವಾಮಿ, ವಿ.ಸಿ ಫಾರಂನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಕಮಲಾಬಾಯಿ ಕೂಡಗಿ ಪಾಲ್ಗೊಂಡಿದ್ದರು. 

ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 177 ಕೆರೆಗಳು  ‘ಮತ್ಸ್ಯ ಸಂಪದ’ ಯೋಜನೆಯಡಿ 742 ಫಲಾನುಭವಿಗಳು ಮೀನುಗಾರಿಕೆ ಕುರಿತು ತರಬೇತಿ ನೀಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.