
ಮಂಡ್ಯ: ‘ಕಳೆದ ಬಾರಿಗಿಂತ ಈ ಬಾರಿ ವಿಶೇಷವಾಗಿ 2 ಲಕ್ಷಕ್ಕೂ ಅಧಿಕ ಹೂಗಳನ್ನು ಬಳಿಸಿ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಮಾಡಲಾಗಿದೆ ಹಾಗೂ ಎಲ್ಲ ಇಲಾಖೆಗಳಿಂದ ವಿಭಿನ್ನ ರೀತಿಯಲ್ಲಿ ಇಲಾಖೆಯ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಕೃಷಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ತೋಟಗಾರಿಕೆ ಆವರಣದಲ್ಲಿ ಜ.23ರಿಂದ 27ರವರೆಗೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ 2026ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಇಲಾಖೆ ವತಿಯಿಂದ ರೈತ ಮಹಿಳೆಯರು ಉದ್ಯಮಿಯಾಗಿ ಪರಿವರ್ತನೆಯಾಗಲು ಹಾಗೂ ಕೃಷಿ ಇಲಾಖೆಯ ವತಿಯಿಂದ ನೀಡಲಾಗುವ ವಿವಿಧ ಅವಕಾಶಗಳ ಕುರಿತು ವಿಶಿಷ್ಟವಾಗಿ ಫಲಪುಷ್ಪ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಕೃಷಿ ಇಲಾಖೆಯಿಂದ ರೈತ ಮಹಿಳೆಯರಿಗೆ ಉತ್ತೇಜನ ನೀಡಲು ಯಾಂತ್ರೀಕೃತ ಭತ್ತ ನಾಟಿ ಮಾಡುವ ಯಂತ್ರ ಮತ್ತು ರೈತ ಮಹಿಳೆಯನ್ನು ಹೂವಿನ ಕಲಾಕೃತಿಯಲ್ಲಿ ಪ್ರದರ್ಶಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಯಿಯ ಎದೆ ಹಾಲಿನ ಮಹತ್ವ ಕುರಿತು ಸಂದೇಶ ಸಾರಲು ಹೂವಿನ ಕಲಾಕೃತಿಯನ್ನು ಮಾಡಲಾಗಿದೆ. ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳುವಿನ ಕಲಾಕೃತಿ ಪ್ರದರ್ಶನ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ವತಿಯಿಂದ ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರವಾಸ ತಾಣಗಳ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಜಿಲ್ಲಾ ಎಲ್ಲಾ ಯುವಜನತೆ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡು ಅದರ ಉಪಯೋಗ ಮತ್ತು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ವಿ.ಜೆ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ರೂಪಶ್ರೀ ಉಪಸ್ಥಿತರಿದ್ದರು.
‘ಥಾವರ್‌ಚಂದ್ ಗೆಹ್ಲೋತ್ ಅವರು ಜಂಟಿ ಅಧಿವೇಶನದಲ್ಲಿ ರಾಷ್ಟ್ರಗೀತೆ ಬಿಟ್ಟು ಭಾಷಣ ಮಾಡದೇ ಹೋದದ್ದು ರಾಜ್ಯಪಾಲರ ಹುದ್ದೆಗೆ ಗೌರವ ತರುತ್ತದೆಯೇ? ಇವರು ಕೇಂದ್ರ ಸರ್ಕಾರದ ಪ್ರತಿನಿಧಿಯಾ? ಇದ್ದಲ್ಲಿ ಕೇಂದ್ರದ ಏಜೆಂಟ್ ಅಂತ ಘೋಷಣೆ ಮಾಡಲಿ’ ಎಂದು ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು. ರಾಜ್ಯ ಸರ್ಕಾರ ತಯಾರು ಮಾಡಿದ ಭಾಷಣ ಓದುವುದು ಪರಿಪಾಠ. ಎಲ್ಲ ರಾಜ್ಯಗಳ ರಾಜ್ಯಪಾಲರು ಅದನ್ನ ಓದಬೇಕು. ಕುಮಾರಸ್ವಾಮಿಯವರೇ ಹಿಂದೆ ಸಿಎಂ ಆಗಿದ್ದಾಗ ರಾಜ್ಯಪಾಲರನ್ನು ಕೇಂದ್ರ ಸರ್ಕಾರದ ಏಜೆಂಟ್ ಅಂತ ಅಂದಿದ್ರು. ತಮಿಳುನಾಡು ಕೇರಳದಲ್ಲೂ ಇದೇ ಆಗಿದೆ. ಇದರಿಂದ ರಾಜ್ಯದ ಪ್ರಜಾಪ್ರಭುತ್ವ ಹಾಳಾಗುತ್ತಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.