
ನಾಗಮಂಗಲ ತಾಲ್ಲೂಕು ಆಡಳಿತ ಸೌಧದ ಹೊರನೋಟ
ಮಂಡ್ಯ: ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಸರ್ಕಾರಿ ದಾಖಲೆಗಳನ್ನು ಅಕ್ರಮವಾಗಿ ತಿದ್ದಿರುವ ಮತ್ತು ಸೃಷ್ಟಿಸಿರುವ ಆರೋಪದ ಮೇರೆಗೆ ನಾಲ್ವರು ಸರ್ಕಾರಿ ನೌಕರರನ್ನು ಅಮಾನತು ಮಾಡಿ, ಜಿಲ್ಲಾಧಿಕಾರಿ ಕುಮಾರ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.
ದ್ವಿತೀಯ ದರ್ಜೆ ಸಹಾಯಕರಾದ ಸತೀಶ್ ಎಚ್.ವಿ., ಯೋಗೇಶ್, ಗುರುಮೂರ್ತಿ ಮತ್ತು ವಿಜಯ್‌ಕುಮಾರ್ (ಅನಧಿಕೃತ ಗೈರು ಹಾಜರಿ) ಅವರನ್ನು ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಲಾಗಿದೆ.
ಆರೋಪಿತ ನೌಕರರು ಕರ್ತವ್ಯದಲ್ಲಿ ಮುಂದುವರಿದರೆ, ಸಾಕ್ಷ್ಯಗಳನ್ನು ನಾಶಪಡಿಸುವ ಮತ್ತು ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಅಮಾನತು ಜೊತೆಗೆ ಬೇರೆ ಸ್ಥಳಗಳಿಗೆ ವರ್ಗಾಯಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸತೀಶ್ ಅವರನ್ನು ಮದ್ದೂರು ತಾಲ್ಲೂಕು ಕಚೇರಿಗೆ, ಯೋಗೇಶ್ ಅವರನ್ನು ಪಾಂಡವಪುರ ತಾಲ್ಲೂಕು ಕಚೇರಿಗೆ, ಗುರುಮೂರ್ತಿ ಅವರನ್ನು ಶ್ರೀರಂಗಪಟ್ಟಣ ತಾಲ್ಲೂಕು ಕಚೇರಿಗೆ ಹಾಗೂ ವಿಜಯ್‌ಕುಮಾರ್ ಅವರನ್ನು ಕೆ.ಆರ್.ಪೇಟೆ ತಾಲ್ಲೂಕು ಕಚೇರಿಗೆ ವರ್ಗಾಯಿಸಿ ಆದೇಶಿಸಲಾಗಿದೆ.
ಕಾಂತಾಪುರ ಗ್ರಾಮದ ಗ್ರಾಮ ಸಹಾಯಕ ಎಸ್.ಯೋಗೇಶ್ ಅವರನ್ನು ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಆದೇಶಿಸಲಾಗಿದೆ.
ಶಿರಸ್ತೇದಾರರಾದ ರವಿಶಂಕರ್ (ಭೂ ಮಂಜೂರಾತಿ ವಿಭಾಗ) ಮತ್ತು ಉಮೇಶ್ (ಅಭಿಲೇಖಾಲಯ ವಿಭಾಗ) ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಂಬಂಧ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.