ADVERTISEMENT

ಅನುಮತಿ ಪತ್ರ ತನ್ನಿ, ಜಾಗ ಕೊಡುತ್ತೇವೆ: ಎಚ್‌ಡಿಕೆಗೆ ಚಲುವರಾಯಸ್ವಾಮಿ ಸವಾಲು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:38 IST
Last Updated 17 ಡಿಸೆಂಬರ್ 2025, 6:38 IST
ಎನ್‌.ಚಲುವರಾಯಸ್ವಾಮಿ 
ಎನ್‌.ಚಲುವರಾಯಸ್ವಾಮಿ    

ಮಂಡ್ಯ: ‘ಮಿಮ್ಸ್ ಪಕ್ಕದಲ್ಲಿರುವ ತಮಿಳು ಕಾಲೊನಿ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಅವರು ಮೊದಲು ಕೇಂದ್ರದ ಆರೋಗ್ಯ ಇಲಾಖೆಯಿಂದ ಅನುಮತಿ ಪತ್ರ ತರಲಿ, ನಾವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ಕೊಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸವಾಲು ಹಾಕಿದರು. 

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ತಮಿಳು ಕಾಲೊನಿ ಜಾಗದ ವಿಚಾರ ನ್ಯಾಯಾಲಯದಲ್ಲಿದೆ. ತಡೆಯಾಜ್ಞೆ ತೆರವು ಮಾಡಿಸಿದ ನಂತರ ಜಾಗವನ್ನು ಮಿಮ್ಸ್‌ ಆಸ್ಪತ್ರೆಗೆ ಕೊಡಿಸಬಹುದು. ಆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

‘ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಜಾಗ ಕೊಡುತ್ತಿಲ್ಲ ಎಂದು ಕುಮಾರಸ್ವಾಮಿ ಕಳೆದ ಒಂದು ವರ್ಷದಿಂದ ಆಪಾದನೆ ಮಾಡುತ್ತಿದ್ದಾರೆ. ನೋಂದಾಯಿತ ಕಂಪನಿಗೆ ಜಾಗ ಬೇಕಿದ್ದರೆ ಕೆ.ಐ.ಎ.ಡಿ.ಬಿ.ಗೆ ಅರ್ಜಿ ಸಲ್ಲಿಸಬೇಕು. ಜಾಗ ಮಂಜೂರು ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂಬುದನ್ನು ದಿಶಾ ಸಭೆಯಲ್ಲಿ ಡಿಸಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರಿಗೆ ಕಾನೂನು ತಿಳಿದಿಲ್ಲವೇ? ಎಂದು ತಿರುಗೇಟು ನೀಡಿದರು. 

ADVERTISEMENT

ಕೇಂದ್ರ ಸಚಿವರಾಗಿ ಒಂದೂವರೆ ವರ್ಷವಾಗಿದೆ. ಆದರೂ ರಾಜ್ಯಕ್ಕೆ ಮತ್ತು ಮಂಡ್ಯಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ನಾವು ಯಾರೂ ಅವರ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿಲ್ಲ. ಜಮೀನು ಕೊಡುತ್ತಿಲ್ಲ ಎಂಬ ಕುಂಟು ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. 

ಮೈಷುಗರ್‌ ಶಾಲೆಗೆ ₹25 ಕೋಟಿ ಕೊಡುತ್ತೇವೆ ಎಂದು ಹೇಳಿದ್ದ ಎಚ್‌ಡಿಕೆ ನಂತರ ಮಾತು ಬದಲಿಸಿದರು. ಹಿಟ್‌ ಅಂಡ್‌ ರನ್‌ಗೆ ಕುಮಾರಸ್ವಾಮಿ ಫೇಮಸ್‌ ಆಗಿದ್ದಾರೆ. ಸುಳ್ಳು ಹೇಳಿಕೆ ಮೂಲಕ ಜನರನ್ನು ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು. 

‘ರೈತರ ಆತ್ಮಹತ್ಯೆ: ದಾಖಲೆ ಬಿಡುಗಡೆಗೊಳಿಸಲಿ’

ಮಂಡ್ಯ: ‘ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಕುಮಾರಸ್ವಾಮಿ ಮಾತನಾಡಲಿ. ಬೆಳಗಾವಿ ಅಧಿವೇಶನದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರು ಪ್ರಶ್ನೆ ಮಾಡಲಿ ನಾವು ಉತ್ತರ ಕೊಡಲು ಸಿದ್ಧವಿದ್ದೇವೆ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿರುಗೇಟು ನೀಡಿದರು.  ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ ‘ಸತ್ಯ ಹರಿಶ್ಚಂದ್ರನ ರೀತಿ ಮಾತನಾಡುವ ಕುಮಾರಸ್ವಾಮಿಯವರು ಜನರು ಮತ್ತು ಮಾಧ್ಯಮದವರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.  ‘ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಿವೆ. ಆತ್ಮಹತ್ಯೆಗೆ ಹಲವಾರು ಕಾರಣಗಳು ಇರುತ್ತವೆ. ರೈತರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದಲೇ ನಮ್ಮ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಂಚ ಗ್ಯಾರಂಟಿ ಹಾಲಿಗೆ ಪ್ರೋತ್ಸಾಹಧನ ನೀಡುತ್ತಿದೆ’ ಎಂದು ಹೇಳಿದರು.  

190 ಟನ್‌ ಯೂರಿಯಾ ವಶ 

‘ಕೇರಳದ ತಾಜೀರ್ ಎಂಬಾತ ನೆಲಮಂಗಲದ ಬಳಿಯ ಗೋದಾಮಿನಲ್ಲಿ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿ ತಮಿಳುನಾಡಿಗೆ ಸರಬರಾಜು ಮಾಡುತ್ತಿದ್ದ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಜಾಗೃತ ದಳದ ಅಧಿಕಾರಿಗಳು ₹88.67 ಲಕ್ಷ ಮೌಲ್ಯದ 190 ಮೆಟ್ರಿಕ್ ಟನ್ ಯೂರಿಯಾ ವಶಪಡಿಸಿಕೊಂಡಿದ್ದಾರೆ’ ಎಂದು ಎನ್‌.ಚಲುವರಾಯಸ್ವಾಮಿ ಹೇಳಿದರು. ‘ಇಂತಹ ಪ್ರಕರಣಗಳು ಇದೇ ಮೊದಲಲ್ಲ ಹಿಂದೆಯೂ ಸಹ ನಡೆದಿವೆ. ಕಳೆದ 3 ವರ್ಷಗಳಲ್ಲಿ ಅಕ್ರಮ ದಾಸ್ತಾನು ಮತ್ತು ಮಾರಾಟದ ಸಂಬಂಧ 22 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವರ್ಷ 7 ಪ್ರಕರಣ ದಾಖಲಿಸಿ ₹64 ಲಕ್ಷ ದಂಡ ಹಾಕಲಾಗಿದೆ’ ಎಂದರು.