ADVERTISEMENT

ಮಂಡ್ಯ | ಬೃಂದಾವನ ಅಮ್ಯೂಸ್‌ಮೆಂಟ್‌ ಪಾರ್ಕ್‌: ಟೆಂಡರ್‌ದಾರರ ನಿರಾಸಕ್ತಿ!

ಕೆಆರ್‌ಎಸ್‌ ಬೃಂದಾವನ ಉದ್ಯಾನ ವಿಶ್ವದರ್ಜೆಗೇರಿಸುವ ಯೋಜನೆಗೆ ಆರಂಭದಲ್ಲೇ ವಿಘ್ನ

ಸಿದ್ದು ಆರ್.ಜಿ.ಹಳ್ಳಿ
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
ಕೃಷ್ಣರಾಜಸಾಗರ ಅಣೆಕಟ್ಟೆಯ ಕಳೆಭಾಗದಲ್ಲಿರುವ ಬೃಂದಾವನ ಉದ್ಯಾನ 
ಕೃಷ್ಣರಾಜಸಾಗರ ಅಣೆಕಟ್ಟೆಯ ಕಳೆಭಾಗದಲ್ಲಿರುವ ಬೃಂದಾವನ ಉದ್ಯಾನ    

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನದಲ್ಲಿ ‘ಅಮ್ಯೂಸ್‌ಮೆಂಟ್‌ ಪಾರ್ಕ್‌’ ಸ್ಥಾಪಿಸುವ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆಗೆ ಎರಡು ಬಾರಿ ಟೆಂಡರ್‌ ಕರೆದರೂ ಟೆಂಡರ್‌ದಾರರು ಭಾಗವಹಿಸಿಲ್ಲ. ಹೀಗಾಗಿ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. 

ಶ್ರೀರಂಗಪಟ್ಟಣ ತಾಲ್ಲೂಕಿನ ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಉನ್ನತೀಕರಿಸಲು ಸರ್ಕಾರ ನಿರ್ಧರಿಸಿದ್ದು, ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ 198 ಎಕರೆ ಪ್ರದೇಶದಲ್ಲಿ ₹2,663 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಈಚೆಗೆ ಅನುಮೋದನೆಯನ್ನೂ ನೀಡಿತ್ತು. 

2024ರ ಸೆಪ್ಟೆಂಬರ್‌ 12ರಿಂದ ನವೆಂಬರ್‌ 11ರವರೆಗೆ ಮೊದಲ ಟೆಂಡರ್‌ ಮತ್ತು 2024ರ ಡಿಸೆಂಬರ್‌ 2ರಿಂದ 2025ರ ಜನವರಿ 16ರವರೆಗೆ ಎರಡನೇ ಬಾರಿ ಟೆಂಡರ್‌ ಕರೆಯಲಾಗಿತ್ತು. ಯಾವುದೇ ಬಿಡ್‌ಗಳು ಸ್ವೀಕೃತವಾಗದೆ ಮತ್ತೆ ಟೆಂಡರ್‌ ಅವಧಿ ಜನವರಿ 23ರವರೆಗೆ ವಿಸ್ತರಣೆಯಾಗಿದೆ. 

ADVERTISEMENT

34.5 ವರ್ಷ ಗುತ್ತಿಗೆ ಅವಧಿ:

ನಾಲ್ಕೂವರೆ ವರ್ಷಗಳ ನಿರ್ಮಾಣ ಅವಧಿ ಹಾಗೂ ನಂತರದ 30 ವರ್ಷಗಳ ನಿರ್ವಹಣಾ ಅವಧಿ ಒಳಗೊಂಡಂತೆ ಒಟ್ಟು 34.5 ವರ್ಷಗಳ ಗುತ್ತಿಗೆ ಅವಧಿಯಿದ್ದು, ಮೂರು ಹಂತಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ.

‘₹2,663 ಕೋಟಿ ಬೃಹತ್‌ ಮೊತ್ತ ಹೂಡಿಕೆ ಮಾಡುವುದರಿಂದ ನಿರ್ವಹಣಾ ಅವಧಿಯನ್ನು ಕನಿಷ್ಠ 40 ವರ್ಷ ನೀಡಬೇಕು ಮತ್ತು ಕೆಲವು ನಿಯಮಗಳನ್ನು ಸರಳೀಕರಣಗೊಳಿಸಬೇಕು’ ಎಂಬುದು ಟೆಂಡರ್‌ದಾರರ ಬೇಡಿಕೆ. ಈ ಕಾರಣದಿಂದಲೇ ಉದ್ಯಮಿಗಳು ಟೆಂಡರ್‌ನಲ್ಲಿ ಭಾಗವಹಿಸಿಲ್ಲ’ ಎನ್ನಲಾಗುತ್ತಿದೆ. 

ಏನೇನು ಇರಲಿದೆ?

‘ಅಮ್ಯೂಸ್‌ಮೆಂಟ್‌ ಪಾರ್ಕ್‌’ ಯೋಜನೆಯಡಿ ಬೃಂದಾವನ ಉದ್ಯಾನದಲ್ಲಿ ಕಾವೇರಿ ಮಾತೆಯ ಮೂರ್ತಿ, ವಾಟರ್‌ ಪಾರ್ಕ್‌, ಪೆಂಗ್ವಿನ್‌ ಪಾರ್ಕ್‌, ವಾಟರ್‌ ಪ್ಲೇನ್‌ ರೈಡ್‌, ರೋಲರ್‌ ಕೋಸ್ಟರ್‌, ಹಾಟ್‌ ಏರ್‌ ಬಲೂನ್‌ ರೈಡ್‌, ಪ್ಯಾರಾಸೈಲಿಂಗ್‌, ಅರೋಮ ಗಾರ್ಡನ್‌, ಬೊಟಾನಿಕಲ್‌ ಗಾರ್ಡನ್‌, ಜಂಗಲ್‌ ಬೋಟ್‌ ರೈಡ್‌, ಸ್ಕೈ ವಾಕ್‌, ವ್ಯಾಕ್ಸ್‌ ಮ್ಯೂಸಿಯಂ, ಫುಡ್‌ ಪ್ಲಾಜಾ ಮತ್ತು ಬಹುಹಂತದ ಕಾರು ಪಾರ್ಕಿಂಗ್‌ ನಿರ್ಮಿಸಲು ಯೋಜಿಸಲಾಗಿದೆ’ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು.

‘ಪ್ರವಾಸಿಗರ ವಾಹನಗಳ ಪಾರ್ಕಿಂಗ್‌ಗಾಗಿ ಬೃಂದಾವನ ಉದ್ಯಾನ ಸಮೀಪದಲ್ಲೇ 25 ಎಕರೆಯನ್ನು ಭೂಸ್ವಾಧೀನ ಮಾಡಿ, ಅಭಿವೃದ್ಧಿಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಕೆ.ಆರ್‌.ಎಸ್‌. ಅಣೆಕಟ್ಟೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಯೋಜನೆಯನ್ನು ರೂಪಿಸಲಾಗಿದೆ. ಉದ್ಯಾನ ಉನ್ನತೀಕರಣಗೊಳಿಸುತ್ತೇವೆಯೇ ಹೊರತು ಅಲ್ಲಿ ಬೃಹತ್‌ ಕಟ್ಟಡಗಳನ್ನು ನಿರ್ಮಿಸುವುದಿಲ್ಲ’ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು. 

₹2,663 ಕೋಟಿ ವೆಚ್ಚದ ಯೋಜನೆ | 198 ಎಕರೆಯಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ | ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆ

ಡ್ಯಾಂಗೆ ಅಪಾಯ; ಇಂದು ರೈತ ಸಂಘ ಸಭೆ

‘ನೂರು ವರ್ಷಗಳ ಹೊಸ್ತಿಲಲ್ಲಿರುವ ಕನ್ನಂಬಾಡಿ ಅಣೆಕಟ್ಟೆಯ ಕೆಳಭಾಗದಲ್ಲಿ ‘ಅಮ್ಯೂಸ್‌ಮೆಂಟ್‌ ಪಾರ್ಕ್‌’ ಸ್ಥಾಪನೆ ಮಾಡುವುದರಿಂದ ಡ್ಯಾಂಗೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಯೋಜನೆಗೆ ನಮ್ಮ ವಿರೋಧವಿದೆ. ವಾಹನ ಪಾರ್ಕಿಂಗ್‌ಗೆ 25 ಎಕರೆ ಭೂಸ್ವಾಧೀನ ಮಾಡುತ್ತಿರುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಮತ್ತು ಸಚಿವರಿಗೆ ಪತ್ರ ಬರೆದಿದ್ದೇವೆ’ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.  ‘ಜ.18ರಂದು ಮಂಡ್ಯದ ಪ್ರವಾಸಿ ಮಂದಿರದಲ್ಲಿ ರೈತಸಂಘ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಸಭೆ ಕರೆದಿದ್ದು ಹೋರಾಟದ ಮುಂದಿನ ನಡೆಯನ್ನು ನಿರ್ಧರಿಸುತ್ತೇವೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.