ಮಂಡ್ಯ: ಕೆ.ಆರ್.ಎಸ್. ಜಲಾಶಯ ತುಂಬಿದ್ದು, ಕೆರೆಗಳಿಗೆ ನೀರು ತುಂಬಿಸುವ ಕೆಲಸ ಪ್ರಗತಿಯಲ್ಲಿದ್ದರೂ ಕೆಲವು ಕೆರೆಗಳು ತುಂಬಿರುವುದಿಲ್ಲ. ಕೆರೆಗಳಿಗೆ ಒಳಹರಿವಿಗೆ ತೊಂದರೆಯಿದ್ದಲ್ಲಿ ಪರಿಶೀಲಿಸಿ ಪರಿಹರಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ ಮೀನಾ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಶೇ 100ರಷ್ಟು ಕೆರೆಗಳನ್ನು ತುಂಬಿಸಿದರೆ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಕೆರೆಗಳ ಒತ್ತುವರಿ, ಹೂಳು ತೆಗೆಯುವುದು, ಒಳಹರಿವಿನ ತೊಂದರೆಗಳನ್ನು ಪರಿಹರಿಸಲು ಯೋಜನೆ ರೂಪಿಸಿಕೊಳ್ಳಿ ಎಂದರು.
ಸಾಮಾಜಿಕ ಪಿಂಚಣಿಗಳನ್ನು ಪಾವತಿ ಮಾಡುವ ಸಂದರ್ಭದಲ್ಲಿ ಮರಣ ಹೊಂದಿರುವವರ ಮರಣ ಪ್ರಮಾಣ ಪತ್ರ ಪಡೆದು ಈ ಜನ್ಮ ಸಾಫ್ಟ್‌ವೇರ್ ನಲ್ಲಿ ಅಪ್ ಲೋಡ್ ಮಾಡಿಸಿ ಪಿಂಚಣಿ ಪಾವತಿ ನಿಲ್ಲಿಸಲು ಕ್ರಮವಹಿಸಿ ಎಂದರು.
ಲಿಂಗಾನುಪಾತ ವ್ಯತ್ಯಾಸ:
ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಉತ್ತಮವಾಗಿದ್ದರೂ, ಲಿಂಗಾನುಪಾತದ ವ್ಯತ್ಯಾಸ ಹೆಚ್ಚಿರುತ್ತದೆ. ಇದು ಸಮಾಜದಲ್ಲಿ ಹಾನಿಕಾರಕ ಬೆಳವಣಿಗೆಯಾಗಿರುತ್ತದೆ. ಎಲ್ಲ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಹೆಣ್ಣು ಭ್ರೂಣ ಹತ್ಯೆ ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದರು.
ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಅನರ್ಹರನ್ನು ಕೈಬಿಡಬೇಕು ಎಂಬ ಉದ್ದೇಶದಿಂದ ಸರ್ಕಾರದಿಂದ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಗಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕುಮಾರ ಅವರು ಸಭೆಗೆ ಮಳೆಯ ಪ್ರಮಾಣ, ಬಿತ್ತನೆ ಬೀಜ, ಬೆಳೆ ಹಾನಿ, ಮನೆ ಹಾನಿ ಪ್ರಕರಣ, ರಸಗೊಬ್ಬರ, ಆಧಾರ್ ಸೀಡಿಂಗ್, ಭೂ ಸುರಕ್ಷಾ ಯೋಜನೆ ಹಾಗೂ ಮಿಮ್ಸ್ ನಲ್ಲಿ ಕೈಗೊಳ್ಳಬೇಕಿರುವ ಕೆಲಸಗಳ ಬಗ್ಗೆ ಸಭೆಗೆ ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಸಭೆಗೆ ಮನರೇಗಾ, ಜಲ್ ಜೀವನ್ ಮಿಷನ್, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತಂತೆ ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
‘ಕ್ಯಾನ್ಸರ್ ಪ್ರಕರಣ ತಡೆಗಟ್ಟಿ’
ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ನೀಡಿ. ಅಂಗನವಾಡಿ ಹಾಗೂ ಶಾಲಾ ಕೊಠಡಿಗಳು ಬೀಳುವ ಹಂತದಲ್ಲಿದ್ದರೆ ತಕ್ಷಣ ಬೇರೆ ವ್ಯವಸ್ಥೆ ಮಾಡಿ. ಕೊಠಡಿ ದುರಸ್ತಿಯ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಸೂಚಿಸಿದರು. ವಸತಿ ಶಾಲೆಗಳಲ್ಲಿ ವಿದ್ಯಭ್ಯಾಸ ಮಾಡುವ ವಿದ್ಯಾರ್ಥಿಗಳು 24 ಗಂಟೆಗಳ ಕಾಲ ವಸತಿ ಶಾಲೆಗಳಲ್ಲಿರುತ್ತಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ100ರಷ್ಟು ಪಲಿತಾಂಶ ಬರುವಂತೆ ಯೋಜನೆ ರೂಪಿಸಿ ಎಂದರು.
‘ಉದ್ಯೋಗ ತರಬೇತಿ ನೀಡಿ’
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 7136 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು ಅವರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲು ಯುವನಿಧಿ ಪ್ಲಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. 7136 ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆಯ ಆಧಾರದ ಮೇಲೆ ಎಂಜಿನಿಯರಿಂಗ್ ಪದವಿ ಐಟಿಐ ಗುಂಪು ಮಾಡಿ ಅವರಿಗೆ ಉದ್ಯೋಗ ದೊರಕುವ ಕ್ಷೇತ್ರ ಗುರುತಿಸಿ ತರಬೇತಿ ನೀಡಿ ಎಂದು ಮನೋಜ್ ಕುಮಾರ್ ಮೀನಾ ಸೂಚಿಸಿದರು. ಇಂಡಿಯಾ ಸ್ಕಿಲ್ಸ್ 2025 ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು 16 ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.