ಶ್ರೀರಂಗಪಟ್ಟಣ: ‘ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ನಷ್ಟ ಉಂಟಾಗಿದ್ದು, ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ನವರಾತ್ರಿ ಆಚರಣೆ ನಿಮಿತ್ತ ಶುಕ್ರವಾರ ನಡೆದ ಸಮಾರೋಪದ ಸಮಾರಂಭದಲ್ಲಿ ಧಾರ್ಮಿಕ ಸಭೆ, ಮಹಿಳೆಯರಿಗೆ ಮಡಿಲಕ್ಕಿ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ಅತಿವೃಷ್ಟಿಯಿಂದ ಆಗಿರುವ ಹಾನಿಯ ಸ್ಥಳಗಳಿಗೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಜತೆಗೂಡಿ ಪರಿಸ್ಥಿತಿ ವೀಕ್ಷಣೆ ಮಾಡಿ ಬಂದಿದ್ದೇನೆ. ಬೆಳೆ ಮತ್ತು ಆಸ್ತಿ ಪಾಸ್ತಿ ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ’ ಎಂದು ತಿಳಿಸಿದರು.
‘ನವರಾತ್ರಿ ಆಚರಣೆ ನಾಡಿನೆಲ್ಲೆಡೆ ಯಶಸ್ವಿಯಾಗಿ ನಡೆದಿದೆ. ಮೈಸೂರು ದಸರಾ ಮತ್ತು ಶ್ರೀರಂಗಪಟ್ಟಣ ದಸರಾ ಉತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿವೆ. ಚಂದ್ರವನ ಆಶ್ರಮದಲ್ಲಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹಲವು ವರ್ಷಗಳಿಂದ ನವರಾತ್ರಿ ಆಚರಣೆ ನಡೆಸುತ್ತಿದ್ದು ಪ್ರಶಸ್ತಿ ಪ್ರದಾನ ಮತ್ತು ಮಡಿಲಕ್ಕಿ ವಿತರಣೆಯಂತಹ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.
ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ‘ಚಂದ್ರವನ ಆಶ್ರಮ ರಾಷ್ಟ್ರಾಶೀರ್ವಾದ ನೀಡುವ ರಾಜ್ಯದ ಏಕೈಕ ಆಶ್ರಮ. ಮಹಿಳೆಯರಿಗೆ ಮಡಿಲಕ್ಕಿ ವಿತರಿಸುವ ಮೂಲಕ ತವರು ಮಠ ಎಂದು ಹೆಸರಾಗಿದೆ. ನವರಾತ್ರಿ ಆಚರಣೆ ಸಂದರ್ಭದಲ್ಲಿ ಸಾಧಕರಿಗೆ ರಾಷ್ಟ್ರ ಮಟ್ಟದ ಕಾವೇರಿ ಪ್ರಶಸ್ತಿ ಮತ್ತು ಕಾಯಕಸೇವಾ ಧುರೀಣ ಪ್ರಶಸ್ತಿ ನೀಡುತ್ತಾ ಬಂದಿದೆ’ ಎಂದರು.
ಸಂಸದ ಜಗದೀಶ್ ಶೆಟ್ಟರ್, ಚಂದ್ರಮೌಳೇಶ್ವರ ದೇವಾಲಯ ಮುಂದೆ ಪ್ರಾಂಗಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ‘ಚಂದ್ರವನ ಆಶ್ರಮದಲ್ಲಿ ಧ್ಯಾನಾಸಕ್ತರಿಗೆ ಪಿರಮಿಡ್ ನಿರ್ಮಿಸಿರುವುದು ವಿಶೇಷವಾಗಿದೆ. ನವರಾತ್ರಿ ಆಚರಣೆ ನಮ್ಮ ಸಾಂಸ್ಕೃತಿಕ ಮತ್ತು ಪರಂಪರೆಯ ಪ್ರತೀಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಯೋಗವನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ್ದಾರೆ. ತ್ರಿನೇತ್ರ ಶ್ರೀಗಳು ತ್ರಿವಿಧ ದಾಸೋಹದ ಮೂಲಕ ಜನರಿಗೆ ತಾಯಿ ಪ್ರೀತಿ ತೋರಿಸುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಶಸ್ತಿ: ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ್, ಉದ್ಯಮಿ ವೈ.ಎಸ್. ಮಹದೇವ್, ಹಿರಿಯ ವೈದ್ಯ ಡಾ.ಸಿ. ರಾಮಕೃಷ್ಣಯ್ಯ, ಪ್ರಗತಿಪರ ರೈತ ಎಂ.ಸಿ. ಚಂದ್ರೇಗೌಡ ಹಾಗೂ ತಾಂತ್ರಿಕ ಕ್ಷೇತ್ರದ ಸಾಧಕ ಮಹದೇವಯ್ಯ ಅವರಿಗೆ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ‘ಕಾಯಕ ಸೇವಾ ಧುರೀಣ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಧನಲಕ್ಷ್ಮಿ ಚಲುವರಾಯಸ್ವಾಮಿ ಮಹಿಳೆಯರಿಗೆ ಮಡಿಲಕ್ಕಿ ವಿತರಿಸಿದರು. ಶಾಸಕ ಜಿ.ಟಿ. ದೇವೇಗೌಡ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ನೀಲಪ್ಪ ಶಿವಣ್ಣನವರ್, ಮಾಜಿ ಶಾಸಕ ಅರುಣ್ ಪೂಜಾರ್, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ, ನೆ.ಲ. ನರೇಂದ್ರಬಾಬು, ಜಿ.ಪಂ. ಸಿಇಒ ಕೆ.ಆರ್. ನಂದಿನಿ, ತಮಿಳುನಾಡು ರಾಜೇಶ್, ಆಶ್ರಮದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿ ಟಿ.ಪಿ. ಶಿವಕುಮಾರ್ ಇದ್ದರು. ಶೈಲಾ ಸಿದ್ದರಾಮಪ್ಪ ತಂಡದಿಂದ ವಚನ ಗಾಯನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.