ADVERTISEMENT

ಮೈಷುಗರ್‌ಗೆ ಬಾಯ್ಲರ್‌ಹೌಸ್‌: ಸಿಎಂ ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 16:44 IST
Last Updated 13 ಸೆಪ್ಟೆಂಬರ್ 2025, 16:44 IST
   

ಶಿವನಸಮುದ್ರ (ಮಂಡ್ಯ ಜಿಲ್ಲೆ): ‘ಕೃಷಿ ಪ್ರಧಾನ ಜಿಲ್ಲೆ ಮಂಡ್ಯದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ನಡೆಯುತ್ತಿರುವ ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಲಾಭದಾಯಕವನ್ನಾಗಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮವಹಿಸಬೇಕು. ₹60 ಕೋಟಿ ವೆಚ್ಚದ ಬಾಯ್ಲರ್‌ ಹೌಸ್‌ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಗಗನಚುಕ್ಕಿ ಜಲಪಾತೋತ್ಸವ–2025’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಮೈಷುಗರ್‌ ಕಾರ್ಖಾನೆಯ ಅಭಿವೃದ್ಧಿಗೆ ₹112 ಕೋಟಿ ಅನುದಾನ ನೀಡಲಾಗಿದೆ. ಸಚಿವರು ಹಾಗೂ ಶಾಸಕರು ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಲಭಾದಾಯಕವನ್ನಾಗಿಸಿ ಎಂದು ಸೂಚನೆ ನೀಡಿದರು.

ADVERTISEMENT

ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಮುಖ್ಯಮಂತ್ರಿಯವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಸುಮಾರು ₹600 ಕೋಟಿಗೂ ಅಧಿಕ ವೆಚ್ಚದ ಹನಿ ನೀರಾವರಿ ಯೋಜನೆ ಉದ್ಘಾಟಿಸಲಾಗುವುದು. ಯೋಜನೆಯನ್ನು ಮುಖ್ಯಮಂತ್ರಿಗಳ ಅಮೃತ ಹಸ್ತದಿಂದಲೇ ಹನಿ ನೀರಾವರಿ ಯೋಜನೆಯನ್ನು ಉದ್ಘಾಟಿಸುತ್ತೇವೆ ಎಂದು ಹೇಳಿದರು.

‘ದಕ್ಷಿಣ ಭಾರತದಲ್ಲೇ ಎಲ್ಲೂ ಇಲ್ಲದ ಮತ್ಸ್ಯಾಲಯದ ಟನಲ್ ಅಕ್ವೇರಿಯಂ ಸ್ಥಾಪನೆಗೆ ಕೇಂದ್ರದಿಂದ ಅನುಮತಿ ದೊರೆತಿದೆ. ಮಳವಳ್ಳಿ ತಾಲ್ಲೂಕಿನಲ್ಲಿ ನಾಲಾ ಆಧುನೀಕರಣ ಯೋಜನೆಗೆ ರಾಜ್ಯ ಸರ್ಕಾರ ₹300 ಕೋಟಿ ಅನುದಾನವನ್ನು ನೀಡಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌, ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಸುಧಾಮ್‌ ದಾಸ್‌, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್‌, ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ, ಐಪಿಎಸ್‌ ಅಧಿಕಾರಿಗಳಾದ ನಂಜುಂಡಸ್ವಾಮಿ, ಅರುಣ್‌ ಚಕ್ರವರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಮ್ಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಶಿವಣ್ಣ, ದೇವರಾಜು ಭಾಗವಹಿಸಿದ್ದರು.

ಯಾರನ್ನೂ ಓಲೈಸಲ್ಲ, ನೋವೂ ಕೊಡಲ್ಲ: ಸಚಿವ ಚಲುವರಾಯಸ್ವಾಮಿ

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ‘2006ರಿಂದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಚರಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರದಿಂದ ಮಳವಳ್ಳಿ ತಾಲ್ಲೂಕಿಗೆ ಅತಿ ಹೆಚ್ಚು ಅನುದಾನವನ್ನು ತಂದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ವಿಪಕ್ಷಗಳು ಸತತವಾಗಿ ಮಂಡ್ಯದಲ್ಲಿ ಕೋಮುಗಲಭೆ ಎಬ್ಬಿಸಲು ಯತ್ನಿಸುತ್ತಿವೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ಯಾರ ಓಲೈಕೆಗೂ ಮಣೆ ಹಾಕದೆ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಾವು ಯಾರನ್ನೂ ಓಲೈಸುವುದಿಲ್ಲ. ಯಾರಿಗೂ ನೋವು ಕೊಡುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.