ADVERTISEMENT

ಮಂಡ್ಯ: ಸಾಕ್ಷರತಾ ಕಾರ್ಯಕ್ರಮದಲ್ಲಿ ಪರೀಕ್ಷೆ ಬರೆದ ‘ಜೈಲು ಹಕ್ಕಿಗಳು’

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:05 IST
Last Updated 21 ಜುಲೈ 2025, 2:05 IST
ಮಂಡ್ಯ ನಗರದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಅವರು ‘ಕಲಿಕೆಯಿಂದ ಬದಲಾವಣೆ’ ಸಾಕ್ಷರತಾ ಕಾರ್ಯಕ್ರಮದಡಿ 40 ಕೈದಿಗಳು ಕಾರಾಗೃಹ ಕೇಂದ್ರದಲ್ಲಿ ಬರೆಯುತ್ತಿದ್ದ ಸಾಕ್ಷರತಾ ಪರೀಕ್ಷೆ ವೀಕ್ಷಿಸಿದರು
ಮಂಡ್ಯ ನಗರದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಅವರು ‘ಕಲಿಕೆಯಿಂದ ಬದಲಾವಣೆ’ ಸಾಕ್ಷರತಾ ಕಾರ್ಯಕ್ರಮದಡಿ 40 ಕೈದಿಗಳು ಕಾರಾಗೃಹ ಕೇಂದ್ರದಲ್ಲಿ ಬರೆಯುತ್ತಿದ್ದ ಸಾಕ್ಷರತಾ ಪರೀಕ್ಷೆ ವೀಕ್ಷಿಸಿದರು   

ಮಂಡ್ಯ: ‘ಅನಕ್ಷರಸ್ಥ ಜೈಲುವಾಸಿಗಳಿಗೆ ಅಕ್ಷರ ಜ್ಞಾನ ಮೂಡಿಸಿದರೆ ಅವರಲ್ಲಿ ಕೌಶಲಾಭಿವೃದ್ಧಿ ಚಟುವಟಿಕೆ ಹೆಚ್ಚುತ್ತದೆ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಹಾಯವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕಾರಾಗೃಹಕ್ಕೆ ಭಾನುವಾರ ಭೇಟಿ ನೀಡಿದ ಅವರು ‘ಕಲಿಕೆಯಿಂದ ಬದಲಾವಣೆ’ ಸಾಕ್ಷರತಾ ಕಾರ್ಯಕ್ರಮದಡಿ ಕಾರಾಗೃಹ ಕೇಂದ್ರದಲ್ಲಿ 40 ಕೈದಿಗಳು ಬರೆಯುತ್ತಿದ್ದ ಸಾಕ್ಷರತಾ ಪರೀಕ್ಷೆ ವೀಕ್ಷಿಸಿ ಮಾತನಾಡಿದರು.

‘ನಾನಾ ಕಾರಣಗಳಿಗಾಗಿ ಕಾರಾಗೃಹ ಸೇರಿರುವ ಅನಕ್ಷರಸ್ಥ ಕೈದಿಗಳು, ಕಾರಾಗೃಹದಲ್ಲೇ ಕಳೆದ ಒಂದು ವರ್ಷದಿಂದ ಅಕ್ಷರಾಭ್ಯಾಸ ಮಾಡಿದ್ದಾರೆ. 40 ಮಂದಿ ಕೈದಿಗಳ ಪೈಕಿ 3 ಮಹಿಳೆಯರು ಇದ್ದು, ಪರೀಕ್ಷೆ ಬರೆದಿರುವುದು ಮೆಚ್ಚುವ ವಿಷಯವಾಗಿದೆ’ ಎಂದು ಶ್ಲಾಘಿಸಿದರು.

ADVERTISEMENT

‘ಕೈದಿಗಳಿಗೆ ಕೌಶಲಾಭಿವೃದ್ಧಿ ಚಟುವಟಿಕೆಗಳ ಕುರಿತು ತರಬೇತಿ ನೀಡಿ ಅವರಲ್ಲಿ ಕೌಶಲವನ್ನು ಹೆಚ್ಚಿಸುವುದರ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಕಾರಾಗೃಹದಲ್ಲಿ ಮಹಿಳೆಯರಿಗೆ ಒದಗಿಸಿರುವ ಸೌಲಭ್ಯಗಳು ಹಾಗೂ ಬ್ಯಾರಕ್‌ಗಳು, ಕಾರ್ಖಾನೆ ವಿಭಾಗ, ಗ್ರಂಥಾಲಯ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲಸೌಕರ್ಯ ಪರಿಶೀಲಿಸಿದ್ದು, ಇದರ ಸದ್ಬಳಕೆ ಆಗಲಿ’ ಎಂದು ತಿಳಿಸಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, ‘ಬಾಳಿಗೆ ಬೆಳಕು’ ಪುಸ್ತಕದಲ್ಲಿ ಪಠ್ಯವನ್ನು ಬೋಧಿಸಲಾಗಿದೆ. ಬರವಣಿಗೆ, ಓದು ಮತ್ತು ಸಾಮಾನ್ಯ ಲೆಕ್ಕಾಚಾರ ಹಾಗೂ ಸಾಮಾನ್ಯ ಜ್ಞಾನ ಕಲಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ’ ಎಂದರು.

‘ಅಣಬೆ ಬೇಸಾಯ, ಆಹಾರ ಸಿದ್ಧಪಡಿಸುವಿಕೆ, ಪ್ಲಬಿಂಗ್, ಮೋಟಾರು ರಿಪೇರಿ ಸೇರಿದಂತೆ ಕೈದಿಗಳ ಆಸಕ್ತಿ ಆಧರಿಸಿ ತರಬೇತಿಯನ್ನೂ ನೀಡಲಾಗುತ್ತದೆ. ನಮ್ಮ ಗ್ರಂಥಾಲಯದಲ್ಲಿ 18 ಸಾವಿರ ಪುಸ್ತಕಗಳಿವೆ. ಪ್ರತಿ ದಿನ 13 ದಿನಪತ್ರಿಕೆಗಳು, 5 ವಾರ ಪತ್ರಿಕೆಗಳು ಹಾಗೂ ಮಾಸ ಪತ್ರಿಕೆಗಳನ್ನು ಕೈದಿಗಳ ಅನುಕೂಲಕ್ಕಾಗಿ ತರಿಸಲಾಗುತ್ತಿದೆ ಎಂದರು.

ಮಂಡ್ಯ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಮೌಲ್ಯಮಾಪನ ನಡೆಯಲಿದೆ. ಉತ್ತೀರ್ಣರಾದವರಿಗೆ ‘ನವ ಸಾಕ್ಷರ ಪ್ರಮಾಣಪತ್ರ’ ನೀಡಲಾಗುವುದು
ಟಿ.ಕೆ.ಲೋಕೇಶ್ ಜಿಲ್ಲಾ ಕಾರಾಗೃಹ ಅಧೀಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.