ADVERTISEMENT

ಮೌಲ್ಯಮಾಪನ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ: ಮಂಡ್ಯ ವಿವಿಯ ವಿನೂತನ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 15:42 IST
Last Updated 5 ಜನವರಿ 2026, 15:42 IST
<div class="paragraphs"><p>ಮಂಡ್ಯ ವಿಶ್ವವಿದ್ಯಾಲಯ</p></div>

ಮಂಡ್ಯ ವಿಶ್ವವಿದ್ಯಾಲಯ

   

ಮಂಡ್ಯ: ಇಲ್ಲಿಯ ಮಂಡ್ಯ ವಿಶ್ವವಿದ್ಯಾಲಯವು 2024-25ನೇ ಸಾಲಿನ ಬಿ.ಇಡಿ ಕೋರ್ಸಿನ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆಯ ಮೌಲ್ಯಮಾಪನ ಮುಗಿದ 10 ನಿಮಿಷದಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ದಾಖಲೆ ಮಾಡಿದೆ.

ಮಂಡ್ಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ 11 ಬಿ.ಇಡಿ ಕಾಲೇಜುಗಳಲ್ಲಿ ಡಿ.22ರಿಂದ 26ರವರೆಗೆ 2ನೇ ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆಗಳು ನಡೆದಿದ್ದವು. ಮಂಡ್ಯ ವಿಶ್ವವಿದ್ಯಾಲಯ ರಚನೆಯಾದ ಬಳಿಕ ಮೊದಲ ಬ್ಯಾಚ್‌ನ ಪರೀಕ್ಷೆ ಇದಾಗಿದೆ.

ADVERTISEMENT

ದ್ವಿತೀಯ ಸೆಮಿಸ್ಟರ್‌ನಲ್ಲಿ 736 ಹಾಗೂ 4ನೇ ಸೆಮಿಸ್ಟರ್‌ನಲ್ಲಿ 775 ವಿದ್ಯಾರ್ಥಿಗಳು ಸೇರಿದಂತೆ 1511 ವಿದ್ಯಾರ್ಥಿಗಳು 6 ವಿಷಯಗಳ ಪರೀಕ್ಷೆ ಬರೆದಿದ್ದರು. ಮಂಡ್ಯ ವಿವಿಯ ಮೌಲ್ಯಮಾಪನ ಭವನದಲ್ಲಿ ಡಿ.31ರಂದು ಆರಂಭಗೊಂಡ ಮೌಲ್ಯಮಾಪನ ಕಾರ್ಯವು ಜ.5ರಂದು ಸಂಜೆ 4.40ವರೆಗೆ ನಡೆಯಿತು.

ಒಟ್ಟು 4417 ಉತ್ತರ ಪತ್ರಿಕೆಗಳನ್ನು 48 ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ್ದರು. ಸಂಜೆ 4.50ಕ್ಕೆ 1511 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಮಂಡ್ಯ ವಿವಿ ಪ್ರಕಟಿಸುವ ಮೂಲಕ ಹೊಸ ದಾಖಲೆ ಬರೆದಿದೆ. 1497 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 98ರಷ್ಟು ಫಲಿತಾಂಶ ಬಂದಿದೆ ಎಂದು ಪರೀಕ್ಷಾ ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ.ಎಸ್.ಎಲ್. ಸುರೇಶ್ ತಿಳಿಸಿದ್ದಾರೆ.

ಮಂಡ್ಯ ವಿವಿ ಕುಲಪತಿ ಕೆ.ಶಿವಚಿತ್ತಪ್ಪ, ಮೌಲ್ಯಮಾಪನ ಕುಲಸಚಿವ ಜಿ.ವಿ.ವೆಂಕಟರಮಣ ಅವರು ಕುಲಪತಿಗಳ ಕಚೇರಿಯಲ್ಲಿ ಬಿ.ಇಡಿ. ಕೋರ್ಸ್‌ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್‌ನ ಫಲಿತಾಂಶವನ್ನು ಪ್ರಕಟಿಸಿದರು.

ಮೌಲ್ಯಮಾಪನ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸುವ ಮೂಲಕ ಮಂಡ್ಯ ವಿವಿ ವಿನೂತನ ಹೆಜ್ಜೆ ಇಟ್ಟಿದೆ. ಮಾರ್ಚ್, ಏಪ್ರಿಲ್‌ನಲ್ಲಿ ಘಟಿಕೋತ್ಸವ ನಡೆಸಿ ಪದವಿ ಪ್ರಮಾಣ ಪತ್ರ ನೀಡಲಾಗುವುದು..
– ಕೆ.ಶಿವಚಿತ್ತಪ್ಪ, ಪ್ರಭಾರ ಕುಲಪತಿ, ಮಂಡ್ಯ ವಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.